ಜೂ.27ಕ್ಕೆ ಧಾರವಾಡದಲ್ಲಿ ದಲಿತ ಯುವ ಸಾಹಿತ್ಯ ಸಮ್ಮೇಳನ

ಬೆಂಗಳೂರು, ಜೂ. 19: ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಜೂ.24ರಂದು ಏರ್ಪಡಿಸಿರುವ ಒಂದು ದಿನದ 7ನೆ ಅಖಿಲ ಭಾರತ ದಲಿತ ಯುವ ಸಾಹಿತ್ಯ ಸಮ್ಮೇಳನವನ್ನು ಲೇಖಕಿ, ಐಪಿಎಸ್ ಅಧಿಕಾರಿ ಡಾ. ಧರಣಿದೇವಿ ಮಾಲಗತ್ತಿ ಉದ್ಘಾಟಿಸಲಿದ್ದಾರೆ ಎಂದು ದಲಿತ ಸಾಹಿತಿ ಪರಿಷತ್ತಿನ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ತಿಳಿಸಿದ್ದಾರೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಂಗಣದಲ್ಲಿ ಆಯೋಜಿಸಲಾಗಿರುವ ಸಮ್ಮೇಳನದಲ್ಲಿ ಹಿರಿಯ ಪೊಲೀಸ್ ಅಧಿಕಾರಿ, ಸಂಶೋಧಕ ಡಾ.ಎಂ.ನಂಜುಂಡಸ್ವಾಮಿ ಪರಿಷತ್ತು ಪ್ರಕಟಿಸಿರುವ ಗ್ರಂಥಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ದಸಾಪ ಮುಖವಾಣಿ ‘ದಲಿತೋದಯ’ ಪತ್ರಿಕೆಯನ್ನು ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಡಾ.ಮಲ್ಲಿಕಾರ್ಜುನ ಸಿದ್ದಣ್ಣನವರ್ ಬಿಡುಗಡೆ ಮಾಡಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ವರ ರಂಗಣ್ಣವರ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.
ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಡಾ.ಸತ್ಯಾನಂದ ಪಾತ್ರೋಟ, ಸಮ್ಮೇಳನಾಧ್ಯಕ್ಷೆ ಡಾ.ಸಮತಾ ದೇಶಮಾನೆ ಮಾತನಾಡಲಿದ್ದು, ಸಂಯೋಜಕ ಡಾ.ಸುಭಾಷ್ ನಾಟಿಕರ್, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ ಮಾತನಾಡಲಿದ್ದಾರೆ. ಆರಂಭಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾ ತಂಡಗಳಿಂದ ವೆುರವಣಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸಮತಾ ಭಾರತ: ಸಮ್ಮೇಳನ ಉದ್ಘಾಟನೆ ಬಳಿಕ ಮಧ್ಯಾಹ್ನ 11:30ಕ್ಕೆ ‘ಸಮತಾ ಭಾರತ ಕಟ್ಟುವ ಪ್ರಯತ್ನದ ಸಾಧಕ-ಬಾಧಕಗಳು ಮತ್ತು ದಲಿತ ಸಾಹಿತ್ಯ ಸಂವೇದನೆಗಳು’ ಸಂವಾದ ಗೋಷ್ಠಿಯಲ್ಲಿ ಬೆಂಗಳೂರು ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಪ್ರದೀಪಕುಮಾರ ರಮಾವತ್, ಮೈಸೂರಿನ ಡಾ.ಕುಪ್ನಳ್ಳಿ ಎಂ.ಭೈರಪ್ಪ ಮಾತನಾಡಲಿದ್ದಾರೆ.
ಮಧ್ಯಾಹ್ನ 1:30ಕ್ಕೆ ಯುವಕರು ಮತ್ತು ವರ್ತಮಾನದ ವಿಷಯದ ಕುರಿತು ಉಪನ್ಯಾಸವನ್ನು ಕಲ್ಬುರ್ಗಿ ಕೇಂದ್ರೀಯ ವಿವಿ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮ ಶೇಖರ್ ನೀಡುವರು. ಮಧ್ಯಾಹ್ನ 2:30ರಿಂದ 4ಗಂಟೆ ವರೆಗೆ ಕಾವ್ಯಮೇಳ ನಡೆಯಲಿದೆ ಎಂದು ಹೇಳಿದ್ದಾರೆ.
ಸಮಾರೋಪ: ಅದೇ ದಿನ ಸಂಜೆ 6ಗಂಟೆಗೆ ನಡೆಯಲಿರುವ ಸಮ್ಮೇಳನ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪರಿಷತು ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ವಹಿಸಲಿದ್ದು, ಸಾಹಿತಿ ಡಾ.ಜಯದೇವಿ ಗಾಯಕವಾಡ ಸಮಾರೋಪ ಭಾಷಣ ಮಾಡಲಿದ್ದಾರೆ.







