ಗಾರ್ಮೆಂಟ್ಸ್ ಅಭಿವೃದ್ಧಿಗಾಗಿ ಸಮಿತಿ ರಚನೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಜೂ.19: ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸುವ ಗಾರ್ಮೆಂಟ್ಸ್ ಅಭಿವೃದ್ಧಿಗಾಗಿ ಹೊಸ ಸಮಿತಿಯೊಂದನ್ನು ರಚಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸೂಚನೆ ನೀಡಿದರು.
ಮಂಗಳವಾರ ಕುಮಾರ ಕೃಪಾ ರಸ್ತೆಯ ಗೃಹ ಕಚೇರಿ ಕೃಷ್ಣಾದಲ್ಲಿ ಗಾರ್ಮೆಂಟ್ಸ್ ಮಾಲಕರು ಹಾಗೂ ಕಾರ್ಮಿಕರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದರು.
ಗಾರ್ಮೆಂಟ್ಸ್ ವಲಯದಲ್ಲಿ ಲಕ್ಷಾಂತರ ಮಂದಿ ದುಡಿಯುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಮಹಿಳೆಯರೇ ಇದ್ದು, ಕಾರ್ಮಿಕರ ಹಿತರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ಗಾರ್ಮೆಂಟ್ಸ್ ಉದ್ಯಮದ ಮಾಲಕರು ಒಳಗೊಂಡಂತೆ ಹೊಸ ಸಮಿತಿ ರಚಿಸುವುದಾಗಿ ತಿಳಿಸಿದರು
ಗಾರ್ಮೆಂಟ್ಸ್ ಉದ್ಯಮಗಳು ಶಾಶ್ವತವಾಗಿ ಉಳಿಯಬೇಕಾಗಿದೆ. ಹೀಗಾಗಿ, ಈ ಇಲಾಖೆಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ಗಾರ್ಮೆಂಟ್ಸ್ ಮಾಲಕರು ಮತ್ತು ಕಾರ್ಮಿಕರನ್ನೊಳಗೊಂಡ ಸಮಿತಿ ರಚಿಸಲು ಸೂಚಿಸಿದ್ದೇನೆ. ಇದರಿಂದ ಗಾಮೆಂಟ್ಸ್ ವಲಯದಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಕುಮಾರಸ್ವಾಮಿ ಸಭೆಯಲ್ಲಿ ಹೇಳಿದರು.





