ಖಾಸಗಿ ಕೃಷಿ ವಿವಿ ವಿಚಾರ: ಶೀಘ್ರ ಕಾಯ್ದೆ ತಿದ್ದುಪಡಿಯ ಭರವಸೆ ನೀಡಿದ ಕುಮಾರಸ್ವಾಮಿ

ಬೆಂಗಳೂರು, ಜೂ.19: ಕೃಷಿ ವಿಶ್ವವಿದ್ಯಾಲಯ ಖಾಸಗಿಕರಣ ತಪ್ಪಿಸಲು ವಿಶ್ವವಿದ್ಯಾಲಯ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಭರವಸೆ ನೀಡಿದರು.
ಮಂಗಳವಾರ ಕುಮಾರ ಕೃಪಾ ರಸ್ತೆಯ ಗೃಹ ಕಚೇರಿ ಕೃಷ್ಣಾದಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಕೃಷಿ ವಿವಿ ಕಾಯ್ದೆ ತಿದ್ದುಪಡಿಗೆ ಕೂಲಂಕಷವಾಗಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಕೃಷಿ ವಿಶ್ವವಿದ್ಯಾಲಯದ ಖಾಸಗೀಕರಣ ವಿರೋಧಿಸಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಂಗಳವಾರ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಪ್ರತಿಭಟನಾ ಮೆರವಣಿಗೆ ಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಕೃಷಿ ಇಲಾಖೆ ಕಾರ್ಯದರ್ಶಿ ಹಾಗೂ ವಿದ್ಯಾರ್ಥಿಗಳನ್ನು ಮಂಗಳವಾರ ಸಂಜೆ ಸಭೆ ಕರೆದು ಮಾತುಕತೆ ನಡೆಸಿ ಶೀಘ್ರದಲ್ಲಿಯೇ ಕಾಯ್ದೆಗೆ ತಿದ್ದುಪಡಿ ತಂದು ಸಮಸ್ಯೆ ಬಗೆರಿಸುವುದಾಗಿ ಭರವಸೆ ನೀಡಿದ್ದರು.
ನಿಯೋಗ ಭೇಟಿ: ವಿದ್ಯಾರ್ಥಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಸಭೆಯಲ್ಲಿ ನಟ ಚೇತನ್ ಪಾಲ್ಗೊಂಡಿದ್ದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಚೇತನ್, ಕೃಷಿ ಸೇವಾಕ್ಷೇತ್ರ, ಹೀಗಾಗಿ, ಕೃಷಿ ವಿವಿಯನ್ನ ಖಾಸಗಿಕರಣ ಮಾಡುವುದು ಬೇಡ ಎಂದು ಮನವಿ ಸಲ್ಲಿಸಿದೆವು. ಜೊತೆಗೆ, ಅದರಿಂದ ಉಂಟಾಗುವ ಋಣಾತ್ಮಕ ಪರಿಣಾಮಗಳನ್ನು ಮನವರಿಕೆ ಮಾಡಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೃಷಿ ಸಚಿವರು ಸ್ಪಂದಿಸಿದ್ದು, ಬೇಡಿಕೆ ಸಂಬಂಧ ಸಮಗ್ರ ಮಾಹಿತಿ ನೀಡಲು ತಿಳಿಸಿದ್ದು, ಇನ್ನೆರಡು ದಿನದಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.







