ಇಂಡಿಗೊ ವಿಮಾನಕ್ಕೆ ಹುಸಿ ಬಾಂಬ್ ಕರೆ
ಜೈಪುರ, ಜೂ. 19: ಜೈಪುರ-ಮುಂಬೈ ವಿಮಾನಕ್ಕೆ ಬಾಂಬ್ ಇರಿಸಲಾಗಿದೆ ಎಂದು ಇಂಡಿಗೊ ವಿಮಾನ ಯಾನ ಸಂಸ್ಥೆಯ ಕಾಲ್ ಸೆಂಟರ್ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿತಿಯೋರ್ವನನ್ನು ಮಂಗಳವಾರ ಬಂಧಿಸಲಾಗಿದೆ.
ಜೈಪುರ ನಿವಾಸಿ ಮೋಹಿತ್ ಕುಮರ್ ತಂಕ ಅವರಿಂದ ಮುಂಜಾನೆ 5.30ಕ್ಕೆ ಕರೆ ಸ್ವೀಕರಿಸಲಾಗಿತ್ತು. ಅವರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಕರೆಯ ಬಳಿಕ ಇಂಡಿಗೊ ಅಧಿಕಾರಿಗಳು ಈ ವಿಚಾರವನ್ನು ಬಾಂಬ್ ಬೆದರಿಕೆ ವೌಲ್ಯಮಾಪನ ಸಮಿತಿಗೆ ವರದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸಿದರು ಹಾಗೂ ಕರೆಯನ್ನು ನಿರ್ದಿಷ್ಟ ಬಾಂಬ್ ಬೆದರಿಕೆ ಎಂದು ಘೋಷಿಸಿದ್ದರು. ಕೂಡಲೇ ವಿಮಾನವನ್ನು ಮುಂಜಾನೆ 6.55ಕ್ಕೆ ಸುರಕ್ಷಿತವಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗದೆ ವಿಮಾನ ತಪ್ಪಿ ಹೋಗಬಹುದು ಎಂಬ ಹಿನ್ನೆಲೆಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋನ ಕೊರಿಯೋಗ್ರಾಫರ್ ಹುಸಿ ಕರೆ ಮಾಡಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.