ದಾವಣಗೆರೆ: ನೂತನ ಗಾಜಿನ ಮನೆಗೆ ಭೇಟಿ ನೀಡಿದ ಶಾಸಕ ರವೀಂದ್ರನಾಥ್

ದಾವಣಗೆರೆ,ಜೂ.19: ನೂತನವಾಗಿ ನಿರ್ಮಾಣವಾದ, ಉದ್ಘಾಟನೆಗೆ ಕಾದಿರುವ ಅತ್ಯಾಧುನಿಕ ಗಾಜಿನ ಮನೆ ಗ್ಲಾಸ್ ಒಡೆದಿದ್ದ ಹಿನ್ನೆಲೆಯಲ್ಲಿ ಉತ್ತರ ಶಾಸಕ ಎಸ್.ಎ. ರವೀಂದ್ರನಾಥ್ ಮಂಗಳವಾರ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು.
ನಗರದ ಹೊರ ವಲಯದ ಕುಂದುವಾಡ ಕೆರೆ ಬಳಿ ನಿರ್ಮಿಸಿರುವ ಗಾಜಿನ ಮನೆಗೆ ಭೇಟಿ ನೀಡಿದ್ದ ಶಾಸಕ ಎಸ್.ಎ. ರವೀಂದ್ರನಾಥ್ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಭೂ ಸೇನಾ ನಿಗಮದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಸಮಸ್ಯೆ ಸರಿಪಡಿಸಲು ಸೂಚನೆ ನೀಡಿದರು.
ಗಾಜಿನ ಮನೆ ನಿರ್ಮಾಣ ಕಾಮಗಾರಿಯಲ್ಲಿ ವ್ಯತ್ಯಾಸವಾಗಿದ್ದರೆ ಸರಿಪಡಿಸಿ. ಮೊನ್ನೆ ಗಾಜುಗಳು ಒಡೆದು ಬಿದ್ದಿದ್ದು, ಯಾವುದೇ ಅನಾಹುತ, ಅಪಾಯ ಸಂಭವಿಸಿಲ್ಲ. ಮುಂಜಾಗ್ರತೆಯಾಗಿ ಅಂತಹ ಗಾಜು ತೆರವು ಮಾಡಿ, ಹೊಸದಾಗಿ ಗಾಜು ಅಳವಡಿಸುವಂತೆ ಹೇಳಿದರು.
ಯಾವುದೇ ಕಾರಣಕ್ಕೂ ಗಾಜಿನ ಮನೆಯ ಗಾಜುಗಳು ಉದುರಿ ಬೀಳದಂತೆ ಸರಿಪಡಿಸಿ. ಅಧಿಕಾರಿಗಳು ಇನ್ನು 15 ದಿನದಲ್ಲೇ ಅದನ್ನು ಸರಿಪಡಿಸುತ್ತೇವೆಂಬ ಮಾತು ಹೇಳುತ್ತಿದ್ದೀರಿ. ಅಷ್ಟು ಅವಸರ, ಲಗುಬಗೆಯ ಬದಲು ನಿಧಾನವಾಗಿಯಾದರೂ ಉತ್ತಮವಾಗಿ ಕೆಲಸ ಮಾಡಿ. ಆ.15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಗಾಜಿನ ಮನೆ ಉದ್ಘಾಟನೆಯಾಗುವಂತೆ ಸಿದ್ಧಪಡಿಸಿ ಎಂದು ಅವರು ಸೂಚಿಸಿದರು.
ನಂತರ ಗಾಜಿನ ಮನೆಯಲ್ಲೆಲ್ಲಾ ಸುತ್ತಾಡಿದ ಶಾಸಕರು ಅಲ್ಲಿನ ಕಂಟ್ರೋಲ್ ರೂಂ, ಹೊಂಡದ ಮಾದರಿ, ಸಂಗೀತ ಕಾರಂಜಿ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶವನ್ನು ವೀಕ್ಷಣೆ ಮಾಡಿ, ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಶಿವರಾಜ ಪಾಟೀಲ, ಎಲ್.ಎನ್. ಕಲ್ಲೇಶ, ರಾಂಪುರ ನರೇಂದ್ರ, ಶಾಸಕರ ಆಪ್ತ ಸಹಾಯಕ ಗಂಗಾಧರ ಸ್ವಾಮಿ, ಭೂ ಸೇನಾ ನಿಗಮ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.







