ಮಲೆನಾಡಿನಲ್ಲಿ ಮತ್ತೆ ಮಳೆಯ ಸಿಂಚನ: ಕೃಷಿ ಚಟುವಟಿಕೆ ಚುರುಕು

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಜೂ.20: ಕಳೆದ ನಾಲ್ಕು ದಿನಗಳ ಹಿಂದೆ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಆ ಬಳಿಕ ಮಲೆನಾಡಿನದ್ಯಂತ ಮಳೆಯ ಬಿರುಸು ಕಡಿಮೆಯಾಗಿದೆಯದರೂ ಮೂಡಿಗೆರೆ, ಕಳಸ, ಬಾಳೆಹೊನ್ನೂರು, ಕೊಪ್ಪ, ಜಯಪುರ, ಶೃಂಗೇರಿಯಲ್ಲಿ ನಾಲ್ಕು ದಿನಳಿಂದ ಸಾಧಾರಣ ಮಳೆಯಾಗುತ್ತಿದೆ.
ಮಂಗಳವಾರ ಸಂಜೆ ಹಾಗೂ ರಾತ್ರಿ ಮಲೆನಾಡು ಭಾಗದ ತಾಲೂಕು ವ್ಯಾಪ್ತಿಯ ಕಳಸ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಶೃಂಗೇರಿ, ಕೊಟ್ಟಿಗೆಹಾರ ಮತ್ತಿತರ ಭಾಗಗಲ್ಲಿ ಮಳೆಯಾಗಿದೆ. ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದ್ದು, ಮಲೆನಾಡಿನಾದ್ಯಂತ ಸಾಧಾರಣ ಮಳೆ ಸುರಿದಿದೆ.
ಮಳೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗಿದ ಬಗ್ಗೆ ವರದಿಯಾಗಿಲ್ಲ. ಕಳೆದ ಒಂದು ವಾರದ ಹಿಂದೆ ಮಲೆನಾಡಿನಲ್ಲಿ ಭಾರೀ ನೆರೆಗೆ ಕಾರಣವಾಗಿದ್ದ ತುಂಗಾ, ಭದ್ರಾ ನದಿಗಳು ತುಂಬಿ ಹರಿಯುತ್ತಿವೆಯಾದರೂ ಎಲ್ಲೂ ನೆರೆ ಉಂಟಾದ ಬಗ್ಗೆ ವರದಿಯಾಗಿಲ್ಲ. ಭಾರೀ ಮಳೆಯಿಂದಾಗಿ ಮಲೆನಾಡು ವ್ಯಾಪ್ತಿಯ ಕಾಫಿ, ಅಡಿಕೆ, ಭತ್ತದ ಗದ್ದೆಗಳತ್ತ ರೈತರು, ಬೆಳೆಗಾರರು ಮುಖ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಪ್ರಸಕ್ತ ಮಳೆಯ ಬಿರುಸು ಕಡಿಮೆಯಾಗಿರುವುದರಿಂದ ಮಲೆನಾಡು ಭಾಗಗಳಲ್ಲಿನ ಅಡಿಕೆ, ಕಾಫಿ ತೋಟ, ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದ್ದು, ಅಡಿಕೆ ತೋಟಗಳಲ್ಲಿ ಕ್ರಮಿನಾಶಕ ಸಿಂಪಡಣೆ, ಕಾಫಿ ತೋಟಗಳಲ್ಲಿ ಕಸಿ ಕೆಲಸ, ಗೊಬ್ಬರ ಸಿಂಪಡಣೆಯಂತಹ ಕೃಷಿ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಮಲೆನಾಡಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಭತ್ತಗದ್ದೆಗಳನ್ನು ನಾಟಿಗೆ ಸಿದ್ಧಗೊಳಿಸುವ ಕೆಲಸದಲ್ಲಿ ರೈತರು ಮಗ್ನರಾಗಿದ್ದಾರೆ.
ಇನ್ನು ಜಿಲ್ಲೆಯ ಬಯಲು ಸೀಮೆ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗದಿದ್ದರೂ ರೈತರು ಕೃಷಿ ಚಟುವಟಿಕೆ ಆರಂಭಿಸುವಷ್ಟರ ಮಟ್ಟಿಗೆ ಮಳೆರಾಯ ಕೃಪೆ ತೋರಿದ್ದಾನೆ. ತರೀಕೆರೆ, ಕಡೂರು ತಾಲೂಕು ವ್ಯಾಪ್ತಿಯಲ್ಲಿ ಅಡಿಕೆ ತೋಟಗಳಿಗೆ ನೀರು ಪೂರೈಸಲು ಹರಸಾಹಸ ಪಡುತ್ತಿದ್ದ ಬೆಳೆಗಾರರು ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ತಾಲೂಕುಗಳ ವ್ಯಾಪ್ತಿಯಲ್ಲೂ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಮಲೆನಾಡು ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ಜಲಾಶಯ ವಾಗಿರುವ ಲಕ್ಕವಳ್ಳಿ ಡ್ಯಾಂನಲ್ಲಿ ನೀರಿನ ಮಟ್ಟ ಗರಿಷ್ಠ ಹಂತ ತಲುಪಿರುವುದರಿಂದ ಆ ಭಾಗಗಳ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.







