ಹುತಾತ್ಮ ಯೋಧ ಔರಂಗಜೇಬ್ ಕುಟುಂಬ ದೇಶಕ್ಕೆ ಪ್ರೇರಣೆ: ನಿರ್ಮಲಾ ಸೀತಾರಾಮನ್

ಶ್ರೀನಗರ, ಜೂ. 20: ಜಮ್ಮು ಹಾಗೂ ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾಗಿರುವ ಸೇನಾ ಯೋಧ ಔರಂಗಜೇಬ್‌ನ ಕುಟುಂಬವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಭೇಟಿಯಾಗಿದ್ದಾರೆ. ಯೋಧರು ‘ದೇಶಕ್ಕೆ ಒಂದು ಸ್ಫೂರ್ತಿ’ಯಂತೆ ಎಂದು ಅವರು ಹೇಳಿದ್ದಾರೆ.
ಜೂನ್ 14ರಂದು ದಕ್ಷಿಣ ಕಾಶ್ಮೀರದ ಪುಲ್ವಾಮದಿಂದ ಭಯೋತ್ಪಾದಕರಿಂದ ಅಪಹರಣಕ್ಕೆ ಒಳಗಾಗಿ ಹತ್ಯೆಗೀಡಾದ ಔರಂಗಜೇಬ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಲಾನಿ ಗಡಿಯ ಕುಗ್ರಾಮಕ್ಕೆ ಸೀತಾರಾಮನ್ ತೆರಳಿದ್ದರು.
ತಂದೆ ಸೇರಿದಂತೆ ಹುತಾತ್ಮ ಯೋಧನ ಕುಟುಂಬದ ಸದಸ್ಯರನ್ನು ಭೇಟಿಯಾದ ಬಳಿಕ ಮಾತನಾಡಿದ ಸೀತಾರಾಮನ್, ‘‘ಹುತಾತ್ಮ ಯೋಧನ ಕುಟುಂಬವನ್ನು ಭೇಟಿಯಾಗಲು ನಾನು ಇಲ್ಲಿಗೆ ಆಗಮಿಸಿದೆ’’ ಎಂದಿದ್ದಾರೆ. ‘‘ಇಲ್ಲೊಂದು ಕುಟುಂಬ ಇದೆ. ಇಲ್ಲೊಬ್ಬರು ಹುತಾತ್ಮರಿದ್ದಾರೆ. ಇವರು ಈ ದೇಶಕ್ಕೆ ಪ್ರೇರಣೆ. ಈ ಸಂದೇಶವನ್ನು ನನ್ನೊಂದಿಗೆ ಒಯ್ಯಬಹುದು’’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಈ ವಾರದ ಆರಂಭದಲ್ಲಿ ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಅವರು ಸಲಾನಿ ಗ್ರಾಮಕ್ಕೆ ಭೇಟಿ ನೀಡಿ ಔರಂಗಜೇಬ್‌ನ ಕುಟುಂಬಕ್ಕೆ ಸಾಂತ್ವನ ನೀಡಿದ್ದರು. ಪರಮ ಬಲಿದಾನ ವ್ಯರ್ಥವಾಗದು ಎಂದು ಅವರು ಹೇಳಿದ್ದರು.





