ಸಚಿವ ಝಮೀರ್ ಅಹ್ಮದ್ ಜೊತೆ ರಾಜಕೀಯ ಸಂಘರ್ಷಕ್ಕೆ ಸಿದ್ದ: ಶಾಸಕ ತನ್ವೀರ್ ಸೇಠ್

ಮೈಸೂರು,ಜೂ.20: ಸಚಿವ ಝಮೀರ್ ಅಹ್ಮದ್ ಜೊತೆ ನಾನು ರಾಜಕೀಯವಾಗಿ ಅಥವಾ ವೈಯಕ್ತಿಕವಾಗಿ ಸಂಘರ್ಷಕ್ಕೆ ಸಿದ್ಧ. ಆದರೆ ಮಾಧ್ಯಮಗಳ ಮುಂದೆ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಎನ್.ಆರ್.ಕ್ಷೇತ್ರಕ್ಕೆ ಬಂದು ಶಕ್ತಿ ಪ್ರದರ್ಶನ ಮಾಡುತ್ತೇನೆ ಎಂಬ ಸಚಿವ ಝಮೀರ್ ಅಹ್ಮದ್ ಹೇಳಿಕೆ ವಿಚಾರಕ್ಕೆ ಮೈಸೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಅವನು ಮಾಧ್ಯಮಗಳ ಮುಂದೆ ಮಾತನಾಡಿರುವುದನ್ನು ಕೇಳಿಸಿಕೊಂಡಿದ್ದೇನೆ. ಇದು ಸಭ್ಯತೆ ಇರುವವರು ಆಡುವ ಮಾತಲ್ಲ. ಝಮೀರ್ ಅಹ್ಮದ್ ಜೊತೆ ನಾನು ರಾಜಕೀಯವಾಗಿ ಅಥವಾ ವೈಯುಕ್ತಿಕವಾಗಿ ಸಂಘರ್ಷಕ್ಕೆ ಸಿದ್ಧ. ಮಾಧ್ಯಮಗಳ ಮುಂದೆ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದಿದ್ದಾರೆ.
ನಮ್ಮ ಜನಾಂಗ ಒಪ್ಪಿಕೊಳ್ಳುವ ನಾಯಕತ್ವ ಅವನಲ್ಲಿ ಇಲ್ಲ. ಕಳೆದ ಚುನಾವಣೆಯಲ್ಲಿ ಕೆಟ್ಟ ಹುಳುವಾಗಿ ಬೆಳೆದಿರುವವರ ಪರವಾಗಿ ಝಮೀರ್ ಕೆಲಸ ಮಾಡಿದ. ಶಕ್ತಿ ಪ್ರದರ್ಶನ ಜನರನ್ನು ಸೇರಿಸಿ ತೋರಿಸುವುದಲ್ಲ. ಜನರ ಮನಸ್ಸನ್ನು ಗೆದ್ದು ತೋರಿಸಬೇಕು. ನಾನು ಕ್ಷೇತ್ರ ಬಿಟ್ಟು ಹೊರಗೆ ಹೋಗಿದ್ದೇನಾ ಇಲ್ಲವಾ ಎಂದು ಅಹಂ ತೋರಿಸುವ ಅಗತ್ಯ ಇಲ್ಲ ಎಂದು ಅವರು ಏಕವಚನದಲ್ಲಿ ಮಾತನಾಡಿದರು.
ಬಹುತೇಕ ಮುಸ್ಲಿಂ ಸಮುದಾಯದ ಜನರು ಕಾಂಗ್ರೆಸ್ ಪರ ಇದ್ದರು. ನಾಲ್ಕು ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ಕೇಳಿದ್ದೆವು. ಕೆಲವು ಜನಾಂಗ ಡಿಸಿಎಂ ಸ್ಥಾನ ಕೇಳುತ್ತಿದ್ದಾರೆ. ಅವರು ಪಕ್ಷಕ್ಕೆ ಬೆಂಬಲಿಸಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಮುಸ್ಲಿಮರು ಮಾತ್ರ ಸಂಪೂರ್ಣವಾಗಿ ಕಾಂಗ್ರೆಸ್ ಪರ ಇದ್ದರು. ನಾವು ಸಂಘಟಿತರಾಗಿ ಸ್ಥಾನ ಕೇಳುತ್ತಿಲ್ಲ ಎಂಬುದು ನನ್ನ ಅಭಿಪ್ರಾಯ. ಹೈಕಮಾಂಡ್ ನನಗೆ ಪಕ್ಷಕ್ಕೆ ಮುಜುಗರ ತರುವಂತೆ ಮಾತನಾಡಬೇಡಿ ಎಂದಿದ್ದು, ಅದನ್ನು ಪಾಲಿಸುತ್ತಿದ್ದೇನೆ. ಝಮೀರ್ ನೀಡಿರುವ ಸವಾಲನ್ನು ನಾನು ಸ್ವೀಕರಿಸೋದು ಇಲ್ಲ, ತಳ್ಳಿಹಾಕೋದೂ ಇಲ್ಲ. ಕ್ಷೇತ್ರಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟದ್ದು. ಈ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದೇನೆ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಕಾಂಗ್ರೆಸ್ ತತ್ವ ಸಿದ್ಧಾಂತ ಗೊತ್ತಿರುವುದಿಲ್ಲ. ಇದಕ್ಕಾಗಿ ನಾನು ಅವರನ್ನು ವಿರೋಧಿಸಿದ್ದೇನೆ ಎಂದು ಹೇಳಿದರು.







