ಬಾಲಕರ ಮೇಲಿನ ಹಲ್ಲೆ ಪ್ರಕರಣದ ವೀಡಿಯೊ: ರಾಹುಲ್ ಗಾಂಧಿಗೆ ನೋಟಿಸ್

ಮುಂಬೈ, ಜೂ. 20: ಇಬ್ಬರು ಬಾಲಕರ ಮೇಲೆ ನಡೆದ ದೌರ್ಜನ್ಯದ ವೀಡಿಯೊವನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್‌ಲೋಡ್ ಮಾಡಿ ಗುರುತು ಬಹಿರಂಗಪಡಿಸಿದ ಆರೋಪದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಹಾರಾಷ್ಟ್ರದ ಮಕ್ಕಳ ಹಕ್ಕು ಸಮಿತಿ ಬುಧವಾರ ನೋಟಿಸು ಜಾರಿ ಮಾಡಿದೆ.
ಜಲ್ಗಾಂವ್ ಜಿಲ್ಲೆಯಲ್ಲಿ ಮೇಲ್ಜಾತಿಯ ರೈತರೊಬ್ಬರ ಬಾವಿಯಲ್ಲಿ ಈಜಾಡಿದ ಇಬ್ಬರು ಬಾಲಕರನ್ನು ಅರೆನಗ್ನಗೊಳಿಸಿ ಥಳಿಸಿದ ಘಟನೆಯ ವೀಡಿಯೊವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಮುಂಬೈ ನಿವಾಸಿಯೊಬ್ಬರ ದೂರಿನ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಸಮಿತಿ ಟ್ವಿಟ್ಟರ್ ಹಾಗೂ ರಾಹುಲ್ ಗಾಂಧಿಗೆ ನೋಟಿಸು ಜಾರಿ ಮಾಡಿದೆ. ನೋಟಿಸಿಗೆ ಪ್ರತಿಕ್ರಿಯೆ ನೀಡಲು ಟ್ವಿಟ್ಟರ್‌ಗೆ 10 ದಿನಗಳ ಕಾಲಾವಕಾಶ ನೀಡಿದೆ.
ಈ ನಡುವೆ ಟ್ವೀಟ್ ಕುರಿತಂತೆ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಲು ಯೋಚಿಸುತ್ತಿರುವುದಾಗಿ ಮುಂಬೈಯ ಬಿಜೆಪಿ ಶಾಸಕ ರಾಮ್ ಕದಮ್ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಈ ಟ್ವೀಟ್ ಅನ್ನು ಇದುವರೆಗೆ ಅಳಿಸಿರಲಿಲ್ಲ. ಇದರಿಂದ ಈ ಟ್ವೀಟ್ 9000 ಬಳಕೆದಾರರಿಗೆ ಮರು ಟ್ವೀಟ್ ಆಗಿದೆ.





