ಸಮಾಜ ಇನ್ನೂ ಮೌಢ್ಯದ ಕತ್ತಲೆಯಲ್ಲಿದೆ: ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್

ಮೈಸೂರು, ಜೂ.20: ಕುವೆಂಪು ಅವರು ಬರಹಗಳ ಬದುಕಿನ ಮೂಲಕ ಹಲವಾರು ಲಾಟೀನುಗಳನ್ನು ಹಚ್ಚಿದ್ದು, ವಿದ್ಯುದ್ದೀಪಗಳನ್ನು ಬೆಳಗಿದ್ದರೂ ಸಮಾಜವಿನ್ನೂ ಮೌಢ್ಯದ ಕತ್ತಲೆಯಲ್ಲಿಯೇ ಇರುವುದು ಮಾತ್ರ ವಿಷಾದನೀಯ ಎಂದು ಸಾಹಿತಿ ಪ್ರೋ.ಸಿ.ಪಿ.ಕೃಷ್ಣಕುಮಾರ್ ಬೇಸರ ವ್ಯಕ್ತಪಡಿಸಿದರು.
ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿಂದು ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಡಾ.ಪ್ರಭುಶಂಕರ ಉಪನ್ಯಾಸ ಮಾಲಿಕೆಯಲ್ಲಿ ಕುವೆಂಪು ಅವರ ಕ್ರಾಂತಿಕಾರಕ ವಿಚಾರಗಳು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ವಿಶ್ವಕೋಶವನ್ನು ಅರಿಯಬೇಕೆಂದಿದ್ದರೆ ಕುವೆಂಪು ಅವರನ್ನು ಓದಿ. ಅವರು ಸೀಮೋಲ್ಲಂಘನ ಮಾಡಿದ ಪ್ರತಿಭೆ. ಮೌಢ್ಯದ ಮಹಾಶತ್ರು ಕುವೆಂಪು. ಮೌಢ್ಯದಲ್ಲಿ ಜ್ಞಾನಪೂರ್ವ, ಜ್ಞಾನೋತ್ತರವೆಂದು ಗುರುತಿಸಿದ್ದರು. ಜ್ಞಾನಪೂರ್ವ ಅಂತಹ ಅಪಾಯಕಾರಿಯಲ್ಲ. ಆದರೆ ಜ್ಞಾನೋತ್ತರ ಮೌಢ್ಯ ಅಪಾಯಕಾರಿಯಾದದ್ದು, ಜ್ಞಾನೋತ್ತರ ಮೌಢ್ಯವನ್ನು ಸ್ನಾತಕೋತ್ತರವೆಂದು ನೀವು ಕರೆದುಕೊಳ್ಳಬಹುದು. ಯಾಕೆಂದರೆ ವಿಜ್ಞಾನವನ್ನು ಅರಿತವರೂ ರಾಹುಕಾಲ, ಯಮಗಂಡಕಾಲ,ಗುಳಿಕಕಾಲ ಅನುಸರಿಸುತ್ತಿದ್ದು, ಅವರು ವಿಜ್ಞಾನಿಗಳಲ್ಲ. ವಿಜ್ಞಾನ ಹೊತ್ತ ಕತ್ತೆಗಳು ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಇತ್ತೀಚೆಗೆ ಶಿಕ್ಷಣ ಸಚಿವರು ಯಾರದೋ ಪಾದುಕೆಯನ್ನು ಮೈಯೆಲ್ಲ ಸವರಿಕೊಂಡಿರುವ ಫೋಟೋ ಮಾಧ್ಯಮಗಳಲ್ಲಿ ಬಂದಿತ್ತು. ಅದನ್ನು ನೋಡಿದೆ. ಸಾಲದ್ದಕ್ಕೆ ಅವರು ಶಿಕ್ಷಣ ಸಚಿವರಂತೆ. ಮೌಢ್ಯ ನಮ್ಮಲ್ಲಿ ಹೇಗೆ ತಾಂಡವವಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ನಿದರ್ಶನ ಬೇಕೇ? ಇದು ಖಂಡನಾರ್ಹ. ಶಿಕ್ಷಣ ಸಚಿವರೇ ಈ ರೀತಿ ಆದರೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಏನು ಸಂದೇಶ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಕುವೆಂಪುರವರು ವೈಚಾರಿಕತೆಗೆ ಮಹತ್ವ ಕೊಟ್ಟವರು. ವಿಶ್ವಮಾನವ ಸಂದೇಶಕ್ಕೆ ಮೊದಲ ಪ್ರಾಶಸ್ತ್ಯ ನೀಡಿದವರು. ಜಾತಿ ನಿರ್ಮೂಲನೆಗೆ ಬದುಕು, ಬರಹದ ಮೂಲಕ ಪ್ರಯತ್ನಿಸಿದರು. ನಿರಂಕುಶ ಮತಿಗಳಾಗಿ ಕೃತಿಯಲ್ಲಿ ನನ್ನ ಅಭಿಪ್ರಾಯಗಳು ಕೆಲವರಿಗೆ ರುಚಿಸದಿರಬಹುದು, ಇನ್ನುಕೆಲವರಿಗೆ ಕ್ರಾಂತಿಕಾರಕವಾಗಿ ತೋರಬಹುದು ಎಂದಿದ್ದಾರೆ ಎಂದರಲ್ಲದೇ ಅವರ ಹಲವು ಕವನಗಳ ಕುರಿತು ವಿವರಿಸಿದರು.
ಡಾ.ಪ್ರಭುಶಂಕರ ಸ್ಮಾರಕ ಉಪನ್ಯಾಸ ಮಾಲಿಕೆ ಹಮ್ಮಿಕೊಂಡಿರುವುದು ಅರ್ಥಪೂರ್ಣ. ಅವರು ಶ್ರೇಷ್ಠ ಅಧ್ಯಾಪಕರಲ್ಲಿ ಒಬ್ಬರು. ಶ್ರೇಷ್ಠ ಸಾಹಿತಿ. ಮೌಲಿಕ ಕೊಡುಗೆ ಕೊಟ್ಟವರು. ಅದೇ ರೀತಿ ಇದೇ ವೇಳೆ ಕುವೆಂಪುರವರ ಕ್ರಾಂತಿಕಾರಕ ಉಪನ್ಯಾಸ ಔಚಿತ್ಯ ಪೂರ್ಣವಾಗಿದೆ. ಪ್ರಭುಶಂಕರ್ ಅವರು ಕುವೆಂಪು ಅವರಿಗೆ ಆತ್ಮೀಯರಾಗಿದ್ದು, ಅಂತರಂಗದ ಶಿಷ್ಯರಾಗಿದ್ದರು. ಕುವೆಂಪು ಅವರ ಮಾರ್ಗದರ್ಶನದಲ್ಲಿಯೇ ಪಿ.ಹೆಚ್.ಡಿ.ಪಡೆದರು. ಕನ್ನಡಕ್ಕೆ ಅದೇ ಮೊದಲ ಪಿ.ಹೆಚ್.ಡಿ. ಮೈಸೂರು ವಿವಿ ಗೆ ಮಾತ್ರವಲ್ಲ, ಸಮಾಜಕ್ಕೆ ನಾಡು-ನುಡಿಗೆ ಗಣ್ಯ ಕೊಡುಗೆ ನೀಡಿದವರು. ಪ್ರಸಾರಾಂಗದ ನಿರ್ದೇಶಕರಾಗಿಯೂ ಹಲವಾರು ಕೆಲಸ ಮಾಡಿದರು. ಇಂಗ್ಲಿಷ್ ಕನ್ನಡ ನಿಘಂಟು ಹೊರತಂದರು. ಯುಗ ಯಾತ್ರ ಭಾರತೀಯ ಸಂಸ್ಕೃತಿಯ ಸಂಪುಟ ಹೊರ ತಂದರು. ಸ್ವತಂತ್ರವಾಗಿ ಕೃತಿ ರಚಿಸಿದರು. ಪ್ರಾತಃ ಸ್ಮರಣೀಯರಲ್ಲಿ ಒಬ್ಬರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ನಿರ್ದೇಶಕ ಡಾ.ಕೆ.ಸಿ.ರೆಡ್ಡಿ, ಕುಲಪತಿ ಪ್ರೊ.ಟಿ.ಕೆ.ಉಮೇಶ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ಎಂ ತಳವಾರ್, ಮೈ.ವಿ.ವಿ.ಹಿ.ವಿ.ಸಂ ಅಧ್ಯಕ್ಷ ಡಾ.ವಸಂತಕುಮಾರ್ ತಿಮಕಾಪುರ, ಪ್ರೊ.ಸಿ.ನಾಗಣ್ಣ, ಕೆ.ಅರ್ಕೇಶ್, ಡಾ.ಎಸ್.ಉಮೇಶ್, ಪ್ರೊ.ಕೆ.ರವೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







