ಪುತ್ರರಿಂದ ಕಿರುಕುಳ: ನ್ಯಾಯಾಲಯದ ಮೆಟ್ಟಿಲೇರಿದ ಹಿರಿಯ ಕಾಂಗ್ರೆಸ್ ನಾಯಕನ ಪತ್ನಿ

ಭೋಪಾಲ, ಜೂ. 20: ತನ್ನ ಪುತ್ರರಾದ ಅಭಿಮನ್ಯು ಸಿಂಗ್ ಹಾಗೂ ಅಜಯ್ ಸಿಂಗ್ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ಅರ್ಜುನ್ ಸಿಂಗ್ ಅವರ ಪತ್ನಿ ಸರೋಜ್ ಕುಮಾರಿ ಬುಧವಾರ ಇಲ್ಲಿನ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕಾಂಗ್ರೆಸ್ ನಾಯಕರಾಗಿರುವ ಅಜಯ್ ಸಿಂಗ್ ಮಧ್ಯಪ್ರದೇಶ ವಿಧಾನ ಸಭೆಯ ಪ್ರತಿಪಕ್ಷದ ನಾಯಕ. 83 ವರ್ಷದ ಸರೋಜ್ ಕುಮಾರಿ ಬುಧವಾರ ಕೌಟುಂಬಿಕೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್ ಗೌರವ್ ಪ್ರಜ್ಞಾ ಅವರ ಮುಂದೆ ದೂರು ಸಲ್ಲಿಸಿದ್ದಾರೆ. ಪುತ್ರಿ ವೀಣಾ ಸಿಂಗ್ ಹಾಗೂ ಅನಿವಾಸಿ ಭಾರತೀಯ ಉದ್ಯಮಿ ಸಾಮ್ ವರ್ಮಾ ಅವರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದ ಸರೋಜ್ ಕುಮಾರಿ ದೂರು ದಾಖಲಿಸಿದರು. ಪ್ರತಿಕ್ರಿಯೆದಾರರಿಗೆ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್ ಆದೇಶ ನೀಡಿದ್ದಾರೆ ಹಾಗೂ ಪ್ರಕರಣದ ವಿಚಾರಣೆಯನ್ನು ಜುಲೈ 19ಕ್ಕೆ ನಿಗದಿಪಡಿಸಿದ್ದಾರೆ.
Next Story





