ವಾರಾಹಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಕಷ್ಟ ಸಾಧ್ಯ: ಶಾಸಕ ರಘುಪತಿ ಭಟ್

ಉಡುಪಿ, ಜೂ.20: ವಾರಾಹಿಯ ಭರತ್ಕಲ್‌ನಿಂದ ಹಿರಿಯಡ್ಕ ಬಜೆಗೆ ರಸ್ತೆ ಅಗೆದು ಪೈಪ್‌ಲೈನ್ ಮೂಲಕ ನೀರು ತರುವ ಯೋಜನೆ ಕಷ್ಟಸಾಧ್ಯ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿ ನಗರಸಭೆ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸಾಕಷ್ಟು ತಿರುವುಗಳಿರುವ ಸುಮಾರು 38ಕಿ.ಮೀ. ದೂರದ ರಸ್ತೆಯನ್ನು ಅಗೆದು ಪೈಪ್‌ಲೈನ್ ಮೂಲಕ ನೀರು ತರುವುದು ಕಷ್ಟ. ಈ ಬಗ್ಗೆ ಅಧಿಕಾರಿಗಳು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡ ಬೇಕು. ಮುಂದೆ ಇದರ ನಿರ್ವಹಣೆ ಕೂಡ ಕಷ್ಟವಾಗಲಿದೆ. ಅಲ್ಲದೆ ಪೈಪ್ ಹಾದು ಬರುವ ದಾರಿಯಲ್ಲಿರುವ ಸ್ಥಳೀಯ ಗ್ರಾಪಂಗಳು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ ಎಂದರು.
ವಾರಾಹಿಯ ಭರತ್ಕಲ್‌ನಲ್ಲಿ ಜಾಕ್‌ವೆಲ್ ನಿರ್ಮಿಸಿ ಪಂಪಿಂಗ್ ಮಾಡಿ ಪೈಪ್ ಮೂಲಕ ಬಜೆಗೆ ನೀರು ತರಲಾಗುತ್ತದೆ. ಇದಕ್ಕೆ 172.5ಕೋಟಿ ರೂ. ವೆಚ್ಚವಾಗಲಿದೆ. ಈ ಕಾಮಗಾರಿಯು ಒಟ್ಟು ಮೂರು ಹಂತದಲ್ಲಿ ನಡೆಯಲಿದೆ. ನೀರಾವರಿ ನಿಗಮದ ಪ್ರಕಾರ ವಾರಾಹಿಯಲ್ಲಿ ಬೇಸಿಗೆಯ ನಾಲ್ಕು ತಿಂಗಳಲ್ಲಿ 31.15 ಕ್ಯೂಮೆಕ್ಸ್ ನೀರು ಇರುತ್ತದೆ. ಆದರೆ ನಮಗೆ ಬೇಕಾಗಿರುವುದು ಕೇವಲ 0.47 ಕ್ಯೂಮೆಕ್ಸ್ ಮಾತ್ರ ಎಂದು ಯೋಜನಾಧಿಕಾರಿಗಳು ಮಾಹಿತಿ ನೀಡಿದರು.
ಸುಮಾರು 38 ಕಿ.ಮೀ. ದೂರದ ರಸ್ತೆಯನ್ನು ಅಗೆದು ಪೈಪ್‌ಲೈನ್ ಮೂಲಕ ನೀರು ತರಲಾಗುತ್ತದೆ. ಇದಕ್ಕೆ ಎಂ.ಎಸ್. ಪೈಪ್ ಬಳಕೆ ಮಾಡಲಾಗುತ್ತಿದ್ದು, 50ವರ್ಷ ವಾರಂಟಿ ಇದೆ. ಈ ದಾರಿ ಮಧ್ಯೆ ಒಟ್ಟು ಮೂರು ನದಿಗಳು ಸಿಗುತ್ತದೆ. ಅಲ್ಲಿ ನದಿಯ ಅಡಿಯಲ್ಲಿ ಅಗೆದು ಪೈಪ್‌ಲೈನ್ ಮಾಡಿ ಬಳಿಕ ಕಾಂಕ್ರೀಟ್‌ನಿಂದ ಮುಚ್ಚಲಾಗುತ್ತದೆ ಎಂದು ಅವರು ಹೇಳಿದರು.
38 ಕಿ.ಮೀ. ದೂರದ ರಸ್ತೆಯನ್ನು ಅಗೆದು ಬಜೆಗೆ ನೀರು ತರಲು ಸಾಧ್ಯವೇ ಇಲ್ಲ. ಅದರ ಬದಲು ನೇರ ಕಾರಿಡಾರ್‌ನ್ನು ರಚಿಸಿದರೆ ಕಿ.ಮೀ. ಕಡಿಮೆ ಆಗು ತ್ತದೆ ಎಂದು ಶಾಸಕ ರಘುಪತಿ ಭಟ್ ಸಲಹೆ ನೀಡಿದರು. ಅದಕ್ಕೆ ಉತ್ತರಿಸಿದ ಅಧಿಕಾರಿಗಳು, ನೇರ ಕಾರಿಡಾರ್ ಮಾಡಿದರೆ ಸುಮಾರು 26 ಕಿ.ಮೀ. ಸಾಕಾ ಗುತ್ತದೆ. ಆದರೆ ಭೂಸ್ವಾಧೀನಕ್ಕೆ ತುಂಬಾ ಹಣ ಬೇಕಾಗುತ್ತದೆ ಮತ್ತು ದಾರಿ ಮಧ್ಯೆ ಡೀಮ್ಡ್ ಫಾರೆಸ್ಟ್ ಸಿಗುವುದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗ ಬಹುದು ಎಂದು ತಿಳಿಸಿದರು.
ಉಡುಪಿ ನಗರಸಭೆಗೆ ಅಮೃತ್ ಯೋಜನೆಯಲ್ಲಿ 132.53 ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ ಒಂದು ಕೋಟಿ ರೂ. ಅನುದಾನವನ್ನು ಪಾರ್ಕ್ ಅಭಿವೃದ್ಧಿ ಮೀಸಲಿರಿಸಲಾಗಿದೆ. ಉಳಿದ ಅನುದಾನದಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗೆ ಆದ್ಯತೆ ನೀಡಲಾಗಿದೆ. 38ಕೋಟಿ ರೂ. ಒಳಚರಂಡಿ ಕಾಮಗಾರಿ ಮತ್ತು ಎಡಿಬಿ ಹಾಗೂ ಅಮೃತ್ ಯೋಜನೆಯ ಒಟ್ಟು ಅನುದಾನ 294 ಕೋಟಿ ರೂ.ವನ್ನು ಕುಡಿಯುವ ನೀರಿನ ಕಾಮಗಾರಿಗೆ ಬಳಸಿಕೊಳ್ಳಲಾಗುತ್ತದೆ ಎಂದು ನಗರಸಭೆ ಪರಿಸರ ಇಂಜಿನಿಯರ್ ರಾಘ ವೇಂದ್ರ ತಿಳಿಸಿದರು.
ಸಭೆಯಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪೌರಾಯುಕ್ತ ಜನಾರ್ದನ್, ಮುಖ್ಯ ಇಂಜಿನಿಯರ್ ಗಣೇಶ್ ಮೊದಲಾದ ವರು ಉಪಸ್ಥಿತರಿದ್ದರು.
ಶಿಂಬ್ರಾ ಯೋಜನೆ ಅಸಾಧ್ಯ
ಉಡುಪಿ ನಗರಕ್ಕೆ ನೀರು ಒದಗಿಸಲು ವಾರಾಹಿ ಬದಲು ಮಣಿಪಾಲ ಸಮೀಪದ ಶಿಂಬ್ರಾದಲ್ಲಿ ಸ್ವರ್ಣ ನದಿಗೆ ಅಣೆಕಟ್ಟು ನಿರ್ಮಿಸುವ ಯೋಜನೆ ಅನುಷ್ಠಾನಕ್ಕೆ ತರುವ ಕುರಿತು ಸುರತ್ಕಲ್‌ನ ಎನ್‌ಐಟಿಕೆಯ ತಜ್ಞರ ಅಭಿಪ್ರಾಯ ವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಸಭೆಯಲ್ಲಿ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಶಿಂಭ್ರಾದಲ್ಲಿ ಅಣೆಕಟ್ಟುವಿನ ಎತ್ತರ ಹೆಚ್ಚಿಸಿ ನಿರ್ಮಿಸುವುದರಿಂದ ಸುಮಾರು ಐದು ಎಕರೆ ಭೂಮಿ ಅಗತ್ಯ ಎದು ರಾಗುತ್ತದೆ. ಈ ಭೂಮಿಯ ಸ್ವಾಧೀನಕ್ಕೆ ಸುಮಾರು 150ಕೋಟಿ ರೂ. ಬೇಕಾ ಗುತ್ತದೆ. ಆದುದರಿಂದ ಈ ಯೋಜನೆ ತುಂಬಾ ವೆ್ಚದಾಯಕವಾಗಲಿದೆ ಎಂದು ತಿಳಿಸಿದರು.
ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ
ವಾರಾಹಿ ಯೋಜನೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿರುವ ರೈತ ಸಂಘ, ಈ ಯೋಜನೆಗೆ ತಡೆಯಾಜ್ಞೆ ನೀಡುವಂತೆ ರಿಟ್ ಅರ್ಜಿ ಸಲ್ಲಿಸಿದೆ. ಇದರ ವಿಚಾರಣೆ ಜು.4ರಂದು ನಡೆಯಲಿದ್ದು, ಅಂದು ನಗರಸಭೆಯಿಂದ ಇದಕ್ಕೆ ಪ್ರತ್ಯುತ್ತರ ನೀಡಲಾಗುವುದು ಎಂದು ಪರಿಸರ ಇಂಜಿನಿಯರ್ ರಾಘವೇಂದ್ರ ಸಭೆಗೆ ತಿಳಿಸಿದರು.







