ಜಮ್ಮು-ಕಾಶ್ಮೀರ: ಅಮರನಾಥ ಯಾತ್ರೆಯ ಬಳಿಕ ನೂತನ ರಾಜ್ಯಪಾಲರ ನೇಮಕದ ಸಾಧ್ಯತೆ

ಜಮ್ಮು,ಜೂ.20: ಕೇಂದ್ರವು ಅಮರನಾಥ ಯಾತ್ರೆಯ ಬಳಿಕ ಜಮ್ಮು-ಕಾಶ್ಮೀರಕ್ಕೆ ನೂತನ ರಾಜ್ಯಪಾಲರನ್ನು ನೇಮಕಗೊಳಿಸಬಹುದು ಎಂದು ರಾಜ್ಯದ ಮಾಜಿ ಉಮುಖ್ಯಮಂತ್ರಿ ಕವಿಂದರ್ ಗುಪ್ತಾ ಅವರು ಬುಧವಾರ ಇಲ್ಲಿ ತಿಳಿಸಿದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ನೂತನ ರಾಜ್ಯಪಾಲರ ನೇಮಕ ಮಾಮೂಲು ಕ್ರಮವಾಗಿದೆ. ಅಮರನಾಥ ಯಾತ್ರೆಯ ಬಳಿಕ ಈ ಬಗ್ಗೆ ನಿರ್ಧಾರವು ಹೊರಗೆ ಬೀಳಬಹುದು ಎಂದು ಹೇಳಿದರು.
ಜೂ.28ರಂದು ಆರಂಭಗೊಳ್ಳಲಿರುವ ಯಾತ್ರೆಯು ಎರಡು ತಿಂಗಳ ಕಾಲ ನಡೆಯಲಿದೆ.
ಜಮ್ಮು-ಕಾಶ್ಮೀರದ ಹಾಲಿ ರಾಜ್ಯಪಾಲ ಎನ್.ಎನ್.ವೋಹ್ರಾ ಅವರು ಜೂನ್,2008ರಲ್ಲಿ ನೇಮಕಗೊಂಡಿದ್ದು,2013ರಲ್ಲಿ ಮತ್ತೆ ಐದು ವರ್ಷಗಳಿಗೆ ಅವರ ಅಧಿಕಾರಾವಧಿಯನ್ನು ವಿಸ್ತರಿಸಲಾಗಿತ್ತು. ಯುಪಿಎ ಸರಕಾರದಿಂದ ನೇಮಕಗೊಂಡು ಎನ್‌ಡಿಎ ಆಡಳಿತದಲ್ಲಿಯೂ ತಮ್ಮ ಹುದ್ದೆಯನ್ನುಳಿಸಿಕೊಂಡ ಕೆಲವೇ ರಾಜ್ಯಪಾಲರಲ್ಲಿ ವೋಹ್ರಾ ಒಬ್ಬರಾಗಿದ್ದಾರೆ.
ನೂತನ ಸರಕಾರವು ಶೀಘ್ರವೇ ರಚನೆಯಾಗುತ್ತದೆ ಎಂದು ತಾನು ಭಾವಿಸಿಲ್ಲ. ಅನಿಶ್ಚಿತತೆಗಳಿವೆ ನಿಜ,ಆದರೆ ಬಿಜೆಪಿ ಕೆಲವು ಕಾರ್ಯಸೂಚಿಗಳೊಂದಿಗೆ ತೊಡಗಿಕೊಂಡಿದೆ ಮತ್ತು ಜನರಿಗೆ ಅದು ಗೊತ್ತಾಗಲಿದೆ ಎಂದು ಗುಪ್ತಾ ತಿಳಿಸಿದರು.
ಬಿಜೆಪಿಯು ಪಿಡಿಪಿಯೊಂದಿಗೆ ಮೈತ್ರಿಯನ್ನು ಮುರಿದುಕೊಂಡ ಬಳಿಕ ಮೆಹಬೂಬ ಮುಫ್ತಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರದಿಂದ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿದೆ.





