ಅಣ್ಣನ ಕೊಲೆ ಪ್ರಕರಣ: ಆರೋಪಿ ತಮ್ಮ ದೋಷಮುಕ್ತಿ
ಕುಂದಾಪುರ, ಜೂ.20: ಆರು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಲಂಡಕನಹಳ್ಳಿ ಎಂಬಲ್ಲಿ ನಡೆದ ಅಣ್ಣನ ಕೊಲೆ ಪ್ರಕರಣದ ಆರೋಪಿ ತಮ್ಮ ರಾಜೇಶ್ ನಾಡರ (20) ಎಂಬಾತನನ್ನು ಕಾರವಾರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ನೀಡಿದೆ.
ಆಸ್ತಿ ವಿಚಾರಕ್ಕೆ ಸಂಬಂಧಿಸಿ ರಾಜೇಶ್ ನಾಡರ ತನ್ನ ಅಣ್ಣ ದರ್ಶನ್ (20) ಎಂಬವರನ್ನು 2012ರ ಅ. 9ರಂದು ರಾತ್ರಿ ವೇಳೆ ಹಾರೆಯಿಂದ ಹೊಡೆದು, ನಂತರ ಚೂರಿಯಿಂದ ಇರಿದು ಕೊಲೆ ಮಾಡಿರುವು ದೂರಲಾಗಿತ್ತು. ನಂತರ ಆರೋಪಿ ಪೊಲೀಸರ ತನಿಖೆಯ ದಾರಿ ತಪ್ಪಿಸಲು ತಾನೆ ಶಿರಸಿಯ ಗ್ರಾಮೀಣ ಪೊಲೀಸ್ ಠಾಣೆಗೆ ಹೋಗಿ ಅಣ್ಣನನ್ನು ಯಾರೊ ಕೊಲೆ ಮಾಡಿದ್ದಾರೆಂದು ಸುಳ್ಳು ದೂರು ನೀಡಿದ್ದರು.
ಶಿರಸಿಯ ಅಂದಿನ ಡಿವೈಎಸ್ಪಿ ಟಿ.ನಾಗಯ್ಯ ಶೆಟ್ಟಿ ದೋಷರೋಪಣಾ ಪಟ್ಟಿ ಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಠಲ್ ಧಾರವಾಡಕರ ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿಲ್ಲ ಎಂದು ಅಭಿಪ್ರಾಯಪಟ್ಟು ರಾಜೇಶ್ ನಾಡರ ದೋಷಮುಕ್ತಗೊಳಿಸಿ ಆದೇಶ ನೀಡಿದರು. ಆರೋಪಿ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.





