ನನ್ನ ಪುತ್ರನನ್ನು ಕೊಂದ ಬಿಜೆಪಿ ವಿರುದ್ಧ ಮಾತನಾಡಲು ನನಗೆ ಹಣ ಬೇಕಿಲ್ಲ: ರೋಹಿತ್ ವೇಮುಲಾ ತಾಯಿ ರಾಧಿಕಾ

ಹೊಸದಿಲ್ಲಿ, ಜೂ.20: "ನನ್ನ ಪುತ್ರನನ್ನು ಕೊಂದ ಬಿಜೆಪಿ ವಿರುದ್ಧ ಮಾತನಾಡಲು ನನಗೆ ಹಣ ಬೇಕಾಗಿಲ್ಲ. ನಮಗೆ ಸ್ವಾಭಿಮಾನವಿದೆ" ಎಂದು ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾ ಹೇಳಿದ್ದಾರೆ.
ರೋಹಿತ್ ವೇಮುಲಾ ಕುಟುಂಬಕ್ಕೆ ಮನೆ ನಿರ್ಮಾಣಕ್ಕಾಗಿ 20 ಲಕ್ಷ ರೂ. ನೀಡುವುದಾಗಿ ಇಂಡಿಯನ್ ಯುನಿಯನ್ ಮುಸ್ಲಿಮ್ ಲೀಗ್ (ಐಯುಎಂಎಲ್) ಭರವಸೆ ನೀಡಿತ್ತು. ಆದರೆ ಭರವಸೆಯನ್ನು ಈಡೇರಿಸಲಿಲ್ಲ ಎಂದು ಮಾಧ್ಯಮವೊಂದು ಇತ್ತೀಚೆಗೆ ವರದಿ ಮಾಡಿತ್ತು. ಆದರೆ ಇದನ್ನು ತಿರುಚಿದ ಕೆಲ ಕಿಡಿಗೇಡಿಗಳು, 'ಮೋದಿ ವಿರುದ್ಧ ಮಾತನಾಡಲು ಐಯುಎಂಎಲ್ ವೇಮುಲಾ ತಾಯಿಗೆ ಹಣ ನೀಡುವುದಾಗಿ ಹೇಳಿತ್ತು. ಕೊನೆಗೆ ಹಣ ನೀಡದೆ ಮೋಸ ಮಾಡಿದೆ' ಎಂದು ಸುದ್ದಿಯನ್ನು ತಿರುಚಿದ್ದರು.
ಈ ಬಗ್ಗೆ 'ದ ನ್ಯೂಸ್ ಮಿನಿಟ್'ಗೆ ಪ್ರತಿಕ್ರಿಯಿಸಿದ ರಾಧಿಕಾ ವೇಮುಲಾ, "ಅವರು ಹಣ ನೀಡಿದರೆ ನಾನೇಕೆ ಮಾತನಾಡಬೇಕು?, ಯಾರಾದರೂ ಹಣ ನೀಡಿದರಷ್ಟೇ ಮಾತನಾಡುವ ಹಾಗೆ ಈ ದಲಿತ ಮಹಿಳೆ ಕಾಣುತ್ತಾಳೆಯೇ?, ಯಾರಿಂದಲೂ ಹಣ ಪಡೆದು ಯಾರ ವಿರುದ್ಧವೂ ಮಾತನಾಡಬೇಕಾದ ಅಗತ್ಯ ನನಗಿಲ್ಲ. ಬಿಜೆಪಿ ವಿರುದ್ಧ ಹೋರಾಟ ನಡೆಸಲು ನನಗೆ ಹಣ ಬೇಕಾಗಿಲ್ಲ. ನಾನು ನನ್ನ ಪುತ್ರನನ್ನು ಕಳೆದುಕೊಂಡಿದ್ದೇನೆ. ಮೋದಿ ಹಾಗು ಅವರ ಸಂಪುಟದ ಸಚಿವರು ನನ್ನ ಪುತ್ರನನ್ನು ಕೊಂದರು. ಅವರು ಕೊಂದದ್ದಕ್ಕಾಗಿಯೇ ನಾನು ಮಾತನಾಡುತ್ತಿದ್ದೇನೆ. ಬಿಜೆಪಿ ವಿರುದ್ಧ ಮಾತನಾಡಲು ನಾನು ಎಲ್ಲಿಗೂ ಹೋಗಬಲ್ಲೆ. ನನಗೇನು ಅನಿಸುತ್ತದೆಯೋ ಅದನ್ನು ಮಾತನಾಡಬಲ್ಲೆ. ಅವರು ನನ್ನನ್ನು ಕೊಂದರೂ ಬಿಜೆಪಿ ವಿರುದ್ಧ ಮಾತನಾಡುವುದನ್ನು ನಾನು ಮುಂದುವರಿಸುತ್ತೇನೆ" ಎಂದು ಹೇಳಿದರು.
'ಐಯುಎಂಎಲ್ ನಾಯಕರು ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದಿದ್ದ ತಮ್ಮ ಮಾತಿಗೆ ಬದ್ಧರಾಗಿದ್ದೀರೇ?' ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಈ ಮೊದಲು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ನನ್ನ ಹೇಳಿಕೆಗೆ ನಾನು ಬದ್ಧಳಾಗಿದ್ದೇನೆ. ಈ ಬಗ್ಗೆ ವರದಿಯಾಗುತ್ತಲೇ ಐಯುಎಂಎಲ್ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ. ನನ್ನೊಂದಿಗೆ ಎಂದಿಗೂ ಇರುತ್ತಾರೆ ಹಾಗು ಭರವಸೆ ಈಡೇರಿಸುತ್ತಾರೆ ಎನ್ನುವ ಭರವಸೆಯನ್ನು ನೀಡಿದ್ದಾರೆ. ಇನ್ನೊಂದು ಚೆಕ್ ಕಳುಹಿಸುವುದಾಗಿಯೂ ಹೇಳಿದ್ದಾರೆ" ಎಂದರು.
"ಈ ವಿಚಾರದಲ್ಲಿ ಬಿಜೆಪಿ ಹೇಳಿದ್ದೆಲ್ಲವೂ ಸುಳ್ಳು. ನಾನಿದನ್ನು ಖಂಡಿಸುತ್ತೇನೆ. ನನಗೆ ಹಲವರು ಸಹಾಯ ಮಾಡಿದ್ದಾರೆ. ನನ್ನ ಪುತ್ರನಿಗೆ ನ್ಯಾಯ ದೊರಕಿಸುವ ಸಲುವಾಗಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ನಾನು ಎಲ್ಲಾ ಪಕ್ಷಗಳನ್ನೂ ಸಂಪರ್ಕಿಸಿದ್ದೇನೆ. ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ. ಹಣ ನೀಡಿ ನನ್ನನ್ನು ಮಾತನಾಡಿಸಿದ್ದಾರೆ ಎನ್ನುವುದು ಶುದ್ಧ ಸುಳ್ಳು" ಎಂದವರು ಸ್ಪಷ್ಟಪಡಿಸಿದ್ದಾರೆ.







