ಕೆಎಂಸಿಯಲ್ಲಿ ಅತ್ಯಾಧುನಿಕ ಸಿ.ಟಿ.ಸ್ಕಾನರ್ ಉದ್ಘಾಟನೆ

ಮಣಿಪಾಲ, ಜೂ.20: ಮಣಿಪಾಲ ಕೆಎಂಸಿ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕದ ಬಳಿ ರೇಡಿಯೋಡಯಾಗ್ನೋಸಿಸ್ ವಿಭಾಗದಲ್ಲಿ ಅಳವಡಿಸಲಾಗಿರುವ ದೇಶದಲ್ಲೇ ಮೊತ್ತಮೊದಲನೇಯದೆನ್ನಲಾದ ಅತ್ಯಾಧುನಿಕ ಹೊಸ ತಲೆಮಾರಿನ ಸುಧಾರಿತ 128 ಸ್ಲೈಸ್ ಇನ್ಸಿಸಿವ್ ಸಿ.ಟಿ.ಸ್ಕಾನರ್‌ನ್ನು ಬೆಂಗಳೂರಿನ ಎಂಎಚ್‌ಇಪಿಎಲ್‌ನ ಅಧ್ಯಕ್ಷ ಡಾ.ಎಚ್.ಸುದರ್ಶನ್ ಬಲ್ಲಾಳ್ ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಈಗ ರೋಗ ನಿರ್ಣಯ ಅತಿ ಸುಲಭ ಹಾಗೂ ಕರಾರುವಕ್ಕಾಗಿದ್ದು, ಇದರಿಂದ ರೋಗಿಗಳಿಗೆ ಉತ್ತಮ ಹಾಗೂ ತ್ವರಿತಗತಿಯ ಚಿಕಿತ್ಸೆ ಲಭಿಸಲು ಸಾಧ್ಯವಾಗುತ್ತಿದೆ ಎಂದರು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಆಧುನಿಕ ತಂತ್ರಜ್ಞಾನದ ಚಿಕಿತ್ಸಾ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು. ಇಂದು ಇಲ್ಲಿ ಅಳವಡಿಸಿರುವ 128 ಸ್ಲೈಸ್ ಸಿ.ಟಿ.ಸ್ಕಾನರ್ ನಿಂದ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದರು.
ಮುಂದೆ ಕೆಎಂಸಿಯ ನ್ಯೂಕ್ಲಿಯರ್ ಮೆಡಿಸಿನ್ ವಿಭಾಗಕ್ಕೆ ‘ಪೆಟ್ಸ್ ಸ್ಕಾನರ್’ನ್ನು ಶೀಘ್ರವೇ ಅಳವಡಿಸುವ ಚಿಂತನೆ ನಡೆದಿದೆ ಎಂದು ಡಾ.ಬಲ್ಲಾಳ್, ಮಣಿಪಾಲದ ಮೆಡಿಕಲ್ ಕಾಲೇಜು ದೇಶದ 490 ಮೆಡಿಕಲ್ ಕಾಲೇಜುಗಳಲ್ಲಿ ನಾಲ್ಕನೇ ಸ್ಥಾನದಲ್ಲಿರುವುದು ನಮಗೆ ಹೆಮ್ಮೆ ಎಂದರು.
ಎಂಎಚ್‌ಇಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಲೀಪ್ ಜೋಸ್, ಮಾಹೆ ಕುಲಪತಿ ಡಾ.ವಿನೋದ್ ಭಟ್ ಮಾತನಾಡಿದರು. ಕೆಎಂಸಿ ಮಣಿಪಾಲದ ಸಿಒಒ ಸಿ.ಜಿ.ಮುತ್ತಣ್ಣ ಹಾಗೂ ಡೀನ್ ಡಾ.ಪ್ರಜ್ಞಾ ರಾವ್ ಉಪಸ್ಥಿತರಿದ್ದರು.
ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಡಾ.ಸ್ಮಿತಿ ಶ್ರೀಪತಿ ವಂದಿಸಿದರು. ಡಾ.ಮುತ್ತು ಕಾರ್ಯಕ್ರಮ ನಿರೂಪಿಸಿದರು.







