ಅನುದಾನ ಕಡಿತದಿಂದ ಜಿಪಂ ಕಾರ್ಯವ್ಯಾಪ್ತಿ ಮೊಟಕು: ಶಾಸಕ ಎಂ.ಪಿ ಕುಮಾರಸ್ವಾಮಿ
ಜಿಪಂ ಅಧ್ಯಕ್ಷೆ-ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ

ಚಿಕ್ಕಮಗಳೂರು, ಜೂ.20: ಸ್ಥಳೀಯ ಸಂಸ್ಥೆಗಳಿಗೆ ಈ ಹಿಂದೆ ಸಿಗುತ್ತಿದ್ದ ಅನುದಾನಗಳ ಪೈಕಿ ಸಾಕಷ್ಟು ಅನುದಾನವನ್ನು ಹಿಂದಿನ ಸರಕಾರ ಕಡಿತಗೊಳಿಸಿದೆ. ಇದರಿಂದಾಗಿ ಜಿಪಂನ ಅಧಿಕಾರ ವ್ಯಾಪ್ತಿ ಸೀಮಿತವಾಗುತ್ತಿದೆ. ಜಿಪಂ ಸದಸ್ಯರಿಗೆ ಸೂಕ್ತ ಅನುದಾನಗಳ ಕೊರತೆಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚು ಅನುದಾನಕ್ಕಾಗಿ ಜಿಪಂ ಸದಸ್ಯರು ಹೋರಾಟ ಮಾಡುವುದು ಅನಿವಾರ್ಯಾಗಿದೆ. ಜಿಲ್ಲೆಯ ಮಲೆನಾಡು-ಬಯಲು ಸೀಮೆ ತಾಲೂಕುಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಪಂ ಅಧ್ಯಕ್ಷರೊಂದಿಗೆ ಸದಸ್ಯರು ಹಾಗೂ ಅಧಿಕಾರಿಗಳು ಪರಪ್ಸರ ಸಹಕಾರದಿಂದ ಕಾರ್ಯನಿರ್ವಹಿಸಬೇಕೆಂದು ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಪಿಕುಮಾರಸ್ವಾಮಿ ಕರೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಆವರಣದ ನಝೀರ್ ಸಾಬ್ ಸಭಾಂಗಣದಲ್ಲಿ ಮಂಗಳವಾರ ಜಿಪಂ ನೂತನ ಜಿಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಪಂನಲ್ಲಿ ಬಿಜೆಪಿ ಸತತ 10 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇದು ಜನರ ಸಮಸ್ಯೆಗಳಿಗೆ ಜಿಪಂ ಸದಸ್ಯರು ಸ್ಪಂದಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ನೂತನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ರಾಜಕಾರಣದಲ್ಲಿ ಸಾಕಷ್ಟು ಅನುಭವ ಇರುವುದರಿಂದ ಅವರಿಗೆ ಸದಸ್ಯರು ಮತ್ತು ಜಿಪಂ ಅಧಿಕಾರಿಗಳು ನೌಕರರು ಸಹಕಾರ ನೀಡುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಲು ಬದ್ಧತೆ ತೋರಬೇಕೆಂದರು.
ಜಿಲ್ಲೆ ಬಯಲು ಸೀಮೆ, ಮಲೆನಢು ಭಾಗಗಳನ್ನು ಹೊಂದಿದ್ದು, ಬಯಲು ಸೀಮೆ ಭಾಗಗಳಲ್ಲಿ ಕೃಷಿ, ಜನ, ಜಾನುವಾರುಗಳಿಗೆ ಅಗತ್ಯ ನೀರು ಸಿಗುತ್ತಿಲ್ಲ. ಈ ಭಾಗಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಅಗತ್ಯವಿದ್ದ ಅನುದಾನ ನೀಡುವಲ್ಲಿ ಹಿಂದಿನ ಸರಕಾರ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಿತ್ತು. ಹಾಲಿ ಕಾಂಗ್ರೆಸ್-ಜೆಡಿಎಸ್ ಸರಕಾರವೂ ಈ ಬಗ್ಗೆ ಆಸಕ್ತಿ ವಹಿಸುತ್ತದೆ ಎಂಬ ನಂಬಿಕೆ ಇಲ್ಲ. ಆದ್ದರಿಂದ ಎಲ್ಲ ಸದಸ್ಯರು ನೀರಾವರಿ ಯೋಜನೆಗಳ ಜಾರಿಗೆ ಸರಕಾರದ ಮೇಲೆ ಒತ್ತಡ ಹೇರಲು ಹೋರಾಟ ಮಾಡಬೇಕೆಂದ ಅವರು, ಜಿಪಂ ಸದಸ್ಯರಿಗೆ ಕನಿಷ್ಠ 50 ಲಕ್ಷ ರೂ. ಅನುದಾನವನ್ನಾದರೂ ಒದಗಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು. ಜಿಪಂ ಸದಸ್ಯರು ಯಾವುದೇ ಸಮಸ್ಯೆಗಳ ಬಗ್ಗೆ ಗಮನಸೆಳೆದರೆ ಜಿಲ್ಲೆಯ ನಾಲ್ವರು ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಚರ್ಚಿಸಿ ಪರಿಹಾರ ಒದಗಿಸಲು ಸಹಕಾರ ನೀಡುತ್ತೇವೆ ಎಂದರು.
ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ಸಾಕಷ್ಟು ಅನುಭವ ಇರುವದರಿಂದ ಅವರು ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಭರವಸೆ ಇದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳ ಜನರ ಬೇಡಿಕೆ ಮೂಲಸೌಕರ್ಯ ಕಲ್ಪಿಸಿ ಎಂಬುದಾಗಿದೆ. ಈ ಬೇಡಿಕೆಗಳನ್ನು ಈಡೇರಿಸಿದಲ್ಲಿ ಜನತೆ ಸಂತುಷ್ಟರಾಗುತ್ತಾರೆ. ತಪ್ಪಿದಲ್ಲಿ ರೊಚ್ಚಿಗೇಳುತ್ತಾರೆ. ಇದಕ್ಕೆ ಆಸ್ಪದ ನೀಡದೆ ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕೆಂದ ಅವರು, ಹಾಲಿ ಸಮ್ಮಿಶ್ರ ಸರಕಾರದ ಸ್ಥಿತಿ ನೋಡಿದರೆ ಬೇಸರ ಆಗುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಈ ಬಾರಿಯೂ ಹಾಲಿ ಸರಕಾರ ಸ್ಪಂದಿಸುವುದಿಲ್ಲ. ಪರಸ್ಪರ ಕಚ್ಚಾಟದಲ್ಲಿ ಮುಳುಗಿರುವ ಸಮ್ಮಿಶ್ರ ಸರಕಾರದ ಮಂತ್ರಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಟೀಕಿಸಿದರು.
ಎಮ್ಮೆಲ್ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಜಿಪಂ ಎಲ್ಲ ಸದಸ್ಯರು ಬಯಲು ಸೀಮೆ ಭಾಗದ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಹಕಾರ ನೀಡಬೇಕು. ಮಲೆನಾಡಿನಲ್ಲಿ ಭಾರೀ ಮಳೆಯಿಂದಾಗು ಉಂಟಾಗಿರುವ ಅತೀವೃಷ್ಟಿಗೆ ಪರಿಹಾರ ಒದಗಿಸಲು ಪ್ರಥಮ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿದಿನ ಕನಿಷ್ಠ 18 ಗಂಟೆಗಳ ಕಾಲ ಜನರೊಂದಿಗೆ ಬೆರೆತು ಸಮಸ್ಯೆ ಆಲಿಸಿ, ಮಾದರಿ ಜಿಲ್ಲಾ ಪಂಚಾಯತ್ ಮಾಡಲು ಶ್ರಮಿಸಬೇಕೆಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಜಿಪಂ ಮಾಜಿ ಸದಸ್ಯ ಕಲ್ಮುರುಡಪ್ಪ, ನೂತನ ಜಿಪಂ ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷ ಆನಂದಪ್ಪ, ನಿಕಟಪೂರ್ವ ಜಿಪಂ ಅಧ್ಯಕ್ಷೆ ಚೈತ್ರಶ್ರೀ, ಉಪಾಧ್ಯಕ್ಷ ರಮಾಸ್ವಾಮಿ ಮಾತನಾಡಿದರು. ನಂತರ ನೂತನ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಜಿಪಂನ ಎಲ್ಲ ಸದಸ್ಯರು, ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ರಾಜ್ಯದಲ್ಲಿಯೇ ನಂ. ಜಿಪಂ ಆಗಿ ಹೊರಹೊಮ್ಮಿದೆ. ಈ ಬಾರಿಯೂ ನಂ.1 ಸ್ಥಾನ ಪಡೆಯಲು ಜಿಪಂನ ಎಲ್ಲ ಸದಸ್ಯರು, ಅಧಿಕಾರಿಗಳು, ಶಾಸಕರು ಸಹಕಾರ ನೀಡಬೇಕು.
- ಸುಜಾತಾ ಕೃಷ್ಣಪ್ಪ, ಜಿಪಂ ನೂತನ ಅಧ್ಯಕ್ಷೆ
ರಾಜ್ಯ ಸರಕಾರ ಸ್ಥಳೀಯ ಸಂಸ್ಥೆಗಳ ಅನುದಾನ ಕಡಿತಗೊಳಿಸುತ್ತಿರುವುದರಿಂದ ಜಿಪಂ ಕಾರ್ಯವ್ಯಾಪ್ತಿ ದುರ್ಬಲಗೊಳ್ಳುತ್ತಿದೆ. ಇದರಿಂದಾಗಿ ಜನರ ನಿರೀಕ್ಷೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಜಿಪಂ ಸದಸ್ಯರ ಅನುದಾನ ಹೆಚ್ಚಿತ್ತು. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಈ ಅನುದಾನಗಳನ್ನು ಕಡಿತಗೊಳಿಸಲಾಗಿದೆ. ಜಿಲ್ಲೆಯ ಜನರ ಸಮಸ್ಯೆಗಳ ಪರಿಹಾರ, ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಒದಗಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲು ಎಲ್ಲ ಸದಸ್ಯರು ಪಕ್ಷಭೇದ ಮರೆತು ಒಂದಾಗಬೇಕು.
- ಆನಂದಪ್ಪ, ಜಿಪಂ ನೂತನ ಉಪಾಧ್ಯಕ್ಷ







