ಹಾಸನ: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ಡಿಸಿ ಕಚೇರಿ ಎದುರು ಸಿಪಿಐ ಪ್ರತಿಭಟನೆ

ಹಾಸನ,ಜೂ.20: ಕೇಂದ್ರ ಸರಕಾರದ ಜನವಿರೋಧಿ ನೀತಿಯಿಂದಾಗಿ ಪೆಟ್ರೋಲ್-ಡಿಸೇಲ್ ಬೆಲೆ ಏರಿಸಲಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
2014 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆಯು ಪಾತಾಳಕ್ಕೆ ಕುಸಿಯಿತು. ಬ್ಯಾರಲಿಗೆ 130 ಡಾಲರ್ ಇದ್ದ ಕಚ್ಚಾ ತೈಲದ ಬೆಲೆ ಸುಮಾರು 45 ಡಾಲರಿಗೆ ಕುಸಿಯಿತು. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರಕಾರ ಬಂದ ಮೇಲೆ ತೈಲ ಬೆಲೆ ಕುಸಿಯಲಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೊದಲಿದ್ದ ಬೆಲೆಯ ಶೇಕಡ 25 ರ ಬೆಲೆಗೆ ಕಚ್ಚಾ ತೈಲ ಲಭ್ಯವಿದ್ದರೂ ಸಹ ಪ್ರತಿದಿನ ಪೆಟ್ರೋಲ್-ಡಿಸೇಲ್ ಬೆಲೆಯನ್ನು ಏರಿಸುವ ಕುತಂತ್ರ ಮಾಡಿ ಜನಸಾಮಾನ್ಯರನ್ನು ಸುಲಿಯುವ ಹೊಸ ಮೋಸವನ್ನು ಆರಂಭಿಸಿರುವುದಾಗಿ ದೂರಿದರು. ಪೆಟ್ರೋಲ್-ಡಿಸೇಲ್ ಬೆಲೆಯ ಹೆಚ್ಚಳವು ಸಾಗಾಟದ ಖರ್ಚನ್ನು ಹೆಚ್ಚಿಸುತ್ತದೆ. ಹಾಗೂ ಎಲ್ಲಾ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೂಡಲೇ ತೈಲಬೆಲೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ಮಂಡಳಿ ಕಾರ್ಯದರ್ಶಿ ಎಮ್.ಸಿ. ಡೋಂಗ್ರೆ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.





