ತುಮಕೂರು: ಬಿಸಿಎಂ ಇಲಾಖೆಯ ನೂತನ ನೌಕರರಿಗೆ ನೇಮಕಾತಿ ಪತ್ರ ವಿತರಣೆ

ತುಮಕೂರು, ಜೂ.20: ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ವಸತಿ ನಿಲಯಗಳಿಗೆ ನೇಮಕಗೊಂಡಿರುವ ಅಡುಗೆಯವರು ಮತ್ತು ಅಡುಗೆ ಸಹಾಯಕರ ಒಟ್ಟು 166 ಮಂದಿಗೆ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಅವರು ಬುಧವಾರ ನೇಮಕಾತಿ ಆದೇಶ ಪತ್ರ ನೀಡಿದರು.
ಬಾಲಭವನದಲ್ಲಿಂದು ನಡೆದ ಸರಳ ಕಾರ್ಯಕ್ರಮದಲ್ಲಿ 82 ಮಂದಿ ಅಡುಗೆಯವರು ಹಾಗೂ 84 ಮಂದಿ ಅಡುಗೆ ಸಹಾಯಕರಿಗೆ ಜಿಲ್ಲೆಯ ಹಿಂದುಳಿದ ವರ್ಗ ಇಲಾಖೆಗಳ ವಸತಿ ನಿಲಯಗಳಿಗೆ ಸ್ಥಳ ನಿಯುಕ್ತಿಗೊಳಿಸಿ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಸರಕಾರಿ ಕೆಲಸಕ್ಕೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದು, ತಾವು ನಿರ್ವಹಿಸುವ ಕೆಲಸ ಕಾರ್ಯ ಪಾರದರ್ಶಕತೆಯಿಂದ ಕೂಡಿರಬೇಕು. ಅಲ್ಲದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಸರಕಾರಿ ಕೆಲಸಕ್ಕೆ ಸೇರಿದ ನಂತರ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು, ಎನ್‍ಪಿಎಸ್, ಕೆಜಿಐಡಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಪಡೆಯುವುದು ಸೇರಿದಂತೆ ನೌಕರರು ಅನುಸರಿಸಬೇಕಾದ ನಿಯಮಗಳ ಬಗ್ಗೆ ವಿವರಿಸಿದರು. ಸಮಾರಂಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಂಗೇಗೌಡ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.





