ಕೋಲಾರ: ಕೌಟುಂಬಿಕ ಕಲಹ ಹಿನ್ನೆಲೆ; ನ್ಯಾಯಾಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ

ಕೋಲಾರ,ಜೂ.20: ವಿಚ್ಛೇದನ ನೀಡುವಂತೆ ಪತ್ನಿ ಒತ್ತಾಯಿಸುತ್ತಿದ್ದ ಕಾರಣ ವ್ಯಕ್ತಿಯೋರ್ವ ಕೌಟುಂಬಿಕ ನ್ಯಾಯಾಲಯದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರದ ಕೌಟುಂಬಿಕ ನ್ಯಾಯಾಲಯದಲ್ಲಿ ಗುರುವಾರ ಸಂಭವಿಸಿದೆ.
ನ್ಯಾಯಾಲಯಲ್ಲಿ ವಿಷ ಸೇವಿಸಿ ಕುಸಿದು ಬಿದ್ದ ಆತನನ್ನು ಕೂಡಲೇ ಪೊಲೀಸರು ಕೋಲಾರದ ಎಸ್‍ಎನ್‍ಆರ್ ಆಸ್ಪತ್ರೆಯ ತುರ್ತು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಘಟನೆಯ ವಿವರ: ಕೋಲಾರ ತಾಲೂಕಿನ ಬೆಟ್ಟಬೆಣಜೇನಹಳ್ಳಿ ರಮೇಶ್ ಮತ್ತು ರಾಜೇಶ್ವರಿ ವಿವಾಹ 8 ವರ್ಷಗಳ ಹಿಂದೆ ನಡೆದಿತ್ತು. ನಂತರದ ದಿನಗಳಲ್ಲಿ ಪತಿ ಮತ್ತು ಪತ್ನಿ ನಡುವೆ ಸಾಮರಸ್ಯವಿರಲಿಲ್ಲ. ಮನೆಯಲ್ಲಿ ಸದಾ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತ ಪತ್ನಿ ರಾಜೇಶ್ವರಿ ವಿಚ್ಛೇದನ ಕೋರಿ ಕೋಲಾರದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮೂರು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದು, ವಿಚಾರಣೆಯ ಹಂತದಲ್ಲಿದೆ. ಆದರೆ ರಮೇಶ್ ವಿಚಾರಣೆಗೆ ಹಲವು ಭಾರಿ ಗೈರು ಹಾಜರಾಗಿದ್ದ. ಇದರಿಂದಾಗಿ ನ್ಯಾಯಾಲಯ ರಮೇಶ್ ಬಂಧಕ್ಕೆ ವಾರೆಂಟ್ ಹೊರಡಿಸಿತ್ತು. ಪೊಲೀಸರು ವಾರೆಂಟ್ ಜಾರಿ ಮಾಡಿ ರಮೇಶ್‍ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಈ ಘಟನೆಯಿಂದ ರಮೇಶ್ ತೀವ್ರವಾಗಿ ಆಘಾತಗೊಂಡಿದ್ದ. ಮಧ್ಯಾಹ್ನ ಸುಮಾರು 2 ಗಂಟೆಯಲ್ಲಿ ನ್ಯಾಯಾಧೀಶರ ಮುಂದೆ ಕ್ರಿಮಿನಾಶಕ ಸೇವಿಸಿ ರಮೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ
ಎಸ್‍ಎನ್‍ಆರ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿದ ನಂತರ ಜಾಲಪ್ಪ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಯಿತು. ಚಿಕಿತ್ಸೆ ನಂತರ ರಮೇಶ್ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ.





