ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ಜೂ. 21: ಮ್ಯಾಗ್ಮಾ ಫಿನ್ ಕಾರ್ಪ್ ಲಿಮಿಟೆಡ್ ಕಂಪೆನಿ ವತಿಯಿಂದ ‘ಎಮ್-ಸ್ಕಾಲರ್’ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ಆಡಳಿತ ವಿಭಾಗ ಉಪಾಧ್ಯಕ್ಷ ಕೌಶಿಕ್ ಸಿಂಹ, ಬಡ ಕುಟುಂಬಗಳ ಪ್ರತಿಭಾನ್ವಿತ 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ನಮ್ಮ ಕಂಪೆನಿ ತೀರ್ಮಾನಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಮಾನ್ಯ ವಿಭಾಗದ ಮೂರು ಪದವಿ ಕೋರ್ಸ್‌ಗಳಲ್ಲಿ ಅಥವಾ ವೃತ್ತಿಪರ, ಇಂಜಿನಿಯರಿಂಗ್, ವೈದ್ಯಕೀಯ, ಕಾನೂನು ಮುಂತಾದ ವಿಶೇಷ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ವಿದ್ಯಾರ್ಥಿಗಳು ಭಾರತದ ನಾಗರಿಕರಾಗಿರಬೇಕು. 20 ವರ್ಷ ವಯಸ್ಸಾಗಿರಬೇಕು. ಪಿಯುಸಿಯಲ್ಲಿ ಶೇ. 80ರಷ್ಟು ಅಂಕ ಪಡೆದಿರಬೇಕು ಹಾಗೂ ಕುಟುಂಬದ ಮಾಸಿಕ ಆದಾಯ 10 ಸಾವಿರಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಅರ್ಹ ಅಭ್ಯರ್ಥಿಗಳು ಕಂಪನಿಯಿಂದ ವಿತರಿಸುವ ಅರ್ಜಿ ನಮೂನೆಯೊಂದಿಗೆ ಅಂಕಪಟ್ಟಿ, 2 ಪಾಸ್‌ಪೋರ್ಟ್ ಫೋಟೋ, ವಯಸ್ಸಿನ ದೃಢೀಕರಣ ಪತ್ರ, ವಿಳಾಸ ದೃಢೀಕರಣ ಪತ್ರ, ಪೋಷಕರ ಆದಾಯ ಪ್ರಮಾಣ ಪತ್ರ, ಕಾಲೇಜು ಪ್ರವೇಶ ರಶೀದಿ, ಬ್ಯಾಂಕ್ ಖಾತೆ ವಿವರ ಹಾಗೂ ಶಾಲೆಗಳಿಂದ ಪಡೆದ ನಡವಳಿಕೆ ಪ್ರಮಾಣ ಪತ್ರ ಲಗತ್ತಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ವಿಳಾಸ: ಕಾರ್ಪೋರೆಟ್ ಕಮ್ಯುನಿಕೇಷನ್ ಡಿಪಾರ್ಟ್‌ಮೆಂಟ್ ಮ್ಯಾಗ್ಮಾ ಫಿನ್‌ಕಾರ್ಪ್ ಲಿಮಿಟೆಡ್ ಹೌಸ್, 10ನೇ ಮಹಡಿ, 24 ಪಾರ್ಕ್ ಸ್ಟ್ರೀಟ್ ಕೋಲ್ಕತ್ತಾ, 700016 ಪಶ್ಚಿಮ ಬಂಗಾಳ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 70440 33714 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.







