ಶಿವಕುಮಾರ ಶ್ರೀಗಳ ಆರೋಗ್ಯ ಸ್ಥಿರ: ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ

ಬೆಂಗಳೂರು, ಜೂ.21: ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳಿಗೆ ನಿಯಮಿತ ಆರೋಗ್ಯ ತಪಾಸಣೆಯ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಮುಂದಿನ ಮೂರು-ನಾಲ್ಕು ದಿನಗಳ ಕಾಲ ಮಠದಲ್ಲಿಯೆ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ತಿಳಿಸಿದರು.
ಗುರುವಾರ ಬಿಜೆಪಿ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ ಶ್ರೀಗಳ ಪಿತ್ತಕೋಶಕ್ಕೆ ಸ್ಟಂಟ್ ಅಳವಡಿಸಿ ಆರು ತಿಂಗಳು ಕಳೆದ ಹಿನ್ನೆಲೆಯಲ್ಲಿ ನಿಯಮಿತ ಆರೋಗ್ಯ ತಪಾಸಣೆಗಾಗಿ ಗುರುವಾರ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿಸಿದರು.
ಪಿತ್ತನಾಳ ಬ್ಲಾಕ್ ಆಗಿರುವ ಹಿನ್ನೆಲೆಯಲ್ಲಿ ಜೀರ್ಣಕ್ರಿಯೆ ಆಗದೆ ಆಸ್ಪತ್ರೆಗೆ ಕರೆತರಲಾಗಿದೆ. ಈಗಾಗಲೇ ಸ್ವಾಮೀಜಿ ದೇಹದೊಳಗೆ ಎಂಟು ಸ್ಟಂಟ್ ಅಳವಡಿಸಲಾಗಿದ್ದು, ಜನವರಿಯಲ್ಲಿ ಮೂರು ಸ್ಟಂಟ್ ಅಳವಡಿಸಲಾಗಿತ್ತು. ಈ ಸ್ಟಂಟ್‌ಗಳನ್ನು ಶುಚಿಗೊಳಿಸಲಾಗಿದೆ. ಇದನ್ನು ಹೊರತು ಪಡಿಸಿ ಯಾವ ಸಮಸ್ಯೆಯೂ ಇಲ್ಲವೆಂದು ಅವರು ಹೇಳಿದರು.
ಶ್ರೀಗಳ ಆರೋಗ್ಯ ಉತ್ತಮವಾಗಿದೆ: ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯ ಉತ್ತಮವಾಗಿದೆ. ವೈದ್ಯರು ಶ್ರೀಗಳಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡಿದ್ದಾರೆ. ಭಕ್ತರು ಯಾವುದೆ ಆತಂಕ ಪಡುವ ಅಗತ್ಯವಿಲ್ಲ. ಸದ್ಯ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಅವರು ಹೇಳಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ರೀಗಳ ಆರೋಗ್ಯ ವಿಚಾರಿಸಿದರು.







