ಚಿಕ್ಕಮಗಳೂರು: ಯುದ್ಧ ವಿಮಾನ ಪೈಲಟ್ ಮೇಘನಾಗೆ ಅಭಿನಂದನಾ ಸಮಾರಂಭ

ಚಿಕ್ಕಮಗಳೂರು, ಜೂ.21: ಯುದ್ದ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿರುವ ನಗರದ ಯುವತಿ ಎಂ.ಆರ್.ಮೇಘನಾ ಶ್ಯಾನುಬೋಗ್ ಅವರನ್ನು ಇಲ್ಲಿನ ಬ್ರಾಹ್ಮಣ ಮಹಾಸಭಾ ಬುಧವಾರ ರಾತ್ರಿ ನಗರದ ರಂಗಣ್ಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಆತ್ಮೀಯವಾಗಿ ಅಭಿನಂದಿಸಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೇಘನಾ, 'ಧೈರ್ಯ, ಆತ್ಮವಿಶ್ವಾಸ ಮತ್ತು ಜವಾಬ್ದಾರಿ ಇದ್ದಲ್ಲಿ ಯಾವುದೂ ಅಸಾಧ್ಯವಲ್ಲ. ಸವಾಲು ಎದುರಿಸುವ ಮನಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದ ಅವರು, ತಾವು ನಡೆದು ಬಂದ ಹಾದಿಯನ್ನು ವಿವರಿಸಿದರು. ತಾನು ಮನೆಗಿಂತ ಹಾಸ್ಟೆಲ್ ಮತ್ತು ಪಿಜಿಯಲ್ಲೇ ಓದಿದ್ದು ಹೆಚ್ಚು, ಓದಿಗೆ ಸೀಮಿತ ಅವಧಿ ನೀಡಿ ಸಹಪಠ್ಯ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಮಗಳು ಓದಿನಲ್ಲಿ ಹಿಂದೆ ಬೀಳುತ್ತಾಳೆ ಎಂಬ ಆತಂಕ ಎಲ್ಲ ಪೋಷಕರಂತೆ ನನ್ನ ಹೆತ್ತವರಿಗೂ ಇತ್ತು. ಆದರೆ ಬರೀ ಅಂಕ ಗಳಿಸುವ ಓದಿಗಾಗಿ ಇಡೀ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಕಾ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಆಗ ನನಗೆ ಹೊಳೆದದ್ದೇ ಸಾಹಸ ಚಟುವಟಿಕೆಗಳಾದ ಗ್ಲೈಡಿಂಗ್, ಟ್ರಕ್ಕಿಂಗ್, ಮೌಂಟನೇರಿಂಗ್ ಮತ್ತಿತರ ಚಟುವಟಿಕೆಗಳು ಎಂದರು.
ಕಾಲೇಜಿನಲ್ಲಿದ್ದಾಗ ನಾನೇನೂ ಹೆಚ್ಚು ಓದುತ್ತಿರಲಿಲ್ಲ. ಆದರೂ ಪ್ರಥಮ ದರ್ಜೆಯಲ್ಲೇ ಪಾಸಾಗಿರುತ್ತಿದ್ದೆ. ಇದು ನನ್ನ ಹೆತ್ತವರಿಗೆ ಸಮಾಧಾನ ತರುತ್ತಿತ್ತು, ಕಾಲೇಜಿನ ಪ್ರಥಮ ವರ್ಷದಲ್ಲಿ ನಾನು ಪಡೆದುಕೊಂಡ 26 ದಿನಗಳ ಕಾಲದ ಹಿಮಾಲಯವನ್ನು ಹತ್ತಿ ಇಳಿಯುವ ತರಬೇತಿ ನನಗೆ ಅಧ್ಬುತ ಅನುಭವ ನೀಡಿತು. ಅದಾದ ನಂತರ ನಾವೇ ಕಾಲೇಜಿನಲ್ಲಿ ಸಾಹಸ ಅಡ್ವೆಂಚರ್ ಕ್ಲಬ್ ಸ್ಥಾಪಿಸಿದೆವು. ಇದರ ಮೂಲಕ ಸಾಕಷ್ಟು ವಿದ್ಯಾರ್ಥಿಗಳು ಹಿಮಾಲಯ ಹತ್ತುವಂತಾಯಿತು ಎಂದು ಹೇಳಿದರು.
ಕಾಲೇಜ್ ಬಳಿಕ ಅಪ್ಪನ ಆಸೆಯಂತೆ ಐಎಎಸ್ ಮಾಡಲು ದೆಹಲಿಗೆ ತೆರಳಿದೆ. ಅಲ್ಲಿ ಐಎಎಸ್ ಪೂರ್ವಭಾವಿ ಪರೀಕ್ಷೆಗೆ ಮುನ್ನವೇ ಎಎಫ್‍ಸಿಎಟಿ ಪರೀಕ್ಷೆ ಬರೆದಿದ್ದೆ. ಅದೂ ಪಾಸಾದ ವಿಷಯ ತಿಳಿದಾಗ ನನ್ನ ಹೆತ್ತವರಿಗಾದ ಸಂತೋಷ ಅಷ್ಟಿಷ್ಟಲ್ಲ ಎಂದು ತಿಳಿಸಿದರು.
ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್ ಸಾಮಾನ್ಯವಾಗಿ ತಮ್ಮ ಬಳಿ ಬರುವ ಎಲ್ಲರೂ ಐಎಎಸ್, ಐಪಿಎಸ್, ಇಂಜಿನಿಯರ್, ಡಾಕ್ಟರ್ ಗಳಾಗಬೇಕು ಎಂಬ ಹಂಬಲ ವ್ಯಕ್ತಪಡಿಸುತ್ತಾರೆ. ಆದರೆ ಸೇನೆ ಸೇರುತ್ತೇನೆ, ಪೈಲೆಟ್ ಆಗುತ್ತೇನೆ, ಅದರಲ್ಲೂ ಯುದ್ದ ವಿಮಾನದ ಪೈಲೆಟ್ ಆಗುತ್ತೇನೆ ಎಂದು ಯಾರೂ ಹೇಳುವುದಿಲ್ಲ. ಹಾಗಾಗಿ ಮೇಘನಾ ಎಲ್ಲರಿಗೂ ಮಾದರಿಯಾಗಿದ್ದಾಳೆ ಎಂದರು.
ಇರುವ ಒಬ್ಬಳೇ ಮಗಳನ್ನು ಯುದ್ದ ವಿಮಾನಕ್ಕೆ ಪೈಲೆಟ್ ಆಗಲು ಕಳುಹಿಸಿರುವ ಅವಳ ತಂದೆ ತಾಯಿ ನಿಜಕ್ಕೂ ಅಭಿನಂದನಾರ್ಹರು ಎಂದ ಅವರು, ಧೈರ್ಯ ಮತ್ತು ಛಲವಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬ ಉದಾಹರಣೆಯನ್ನು ಎಲ್ಲ ಸಮುದಾಯದವರಿಗೂ ತೋರಿಸುವ ಉದ್ದೇಶದಿಂದ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೇಘನಾ ಅವರ ತಂದೆ ಎಂ.ಕೆ.ಮಹೇಶ್ ಮಾತನಾಡಿದರು. ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ಎ.ಆರ್.ಶೇಷಾದ್ರಿ ದಂಪತಿ ಮೇಘನಾ ಅವರನ್ನು ಸನ್ಮಾನಿಸಿದರು. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಜೋಷಿ ಅಧ್ಯಕ್ಷತೆ ವಹಿಸಿದ್ದರು, ಸೌಭಾಗ್ಯ ಶೇಷಾದ್ರಿ ಉಪಸ್ಥಿತರಿದ್ದರು. ಗೋಪಾಲಕೃಷ್ಣ ಕಾರ್ಯಕ್ರಮವನ್ನು ನಿರೂಪಿಸಿದರು, ಮಹಾಸಭಾ ಖಜಾಂಚಿ ಹೆಚ್.ಆರ್.ಮೋಹನ್ ಸ್ವಾಗತಿಸಿದರು, ಕಾರ್ಯದರ್ಶಿ ಎಂ.ಕೆ.ಅಶ್ವಿನ್ ವಂದಿಸಿದರು.







