'10 ದಿನದೊಳಗೆ ಲಿಖಿತ ಭರವಸೆ ನೀಡದಿದ್ದರೆ ಟೋಲ್‌ಗೇಟ್ ಬಂದ್'
ನವಯುಗ ಕಂಪೆನಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ

ಮಂಗಳೂರು, ಜೂ.21: ರಾ.ಹೆ.66ರ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದಂತೆ 10 ದಿನದೊಳಗೆ ಲಿಖಿತ ಭರವಸೆ ನೀಡದಿದ್ದರೆ ಸಾರ್ವಜನಿಕರ ಸಹಕಾರದೊಂದಿಗೆ ಟೋಲ್‌ಗೇಟ್ ಬಂದ್ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ತನ್ನ ಕಚೇರಿಯಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಎರಡೂ ಫ್ಲೈಓವರ್‌ಗಳ ಕಾಮಗಾರಿ ಆರಂಭಿಸಿ ಹಲವು ವರ್ಷಗಳಾದರೂ ಕೂಡಾ ಮುಕ್ತಾಯ ಕಾಣುತ್ತಿಲ್ಲ. ರಭಸದ ಮಳೆ ಸುರಿದ ತಕ್ಷಣ ಇಲ್ಲಿ ಸಂಚಾರ ಬ್ಲಾಕ್ ಆಗುತ್ತದೆ. ಸಾರ್ವಜನಿಕರು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಈ ಹಿಂದಿನ ಸಭೆಯಲ್ಲಿ ತೊಕ್ಕೊಟ್ಟಿನ ಕಾಮಗಾರಿಯನ್ನು ಮೇ ತಿಂಗಳಿಗೂ, ಪಂಪ್‌ವೆಲ್‌ನ ಕಾಮಗಾರಿಯನ್ನು ಡಿಸೆಂಬರ್ ನಲ್ಲಿ ಮುಗಿಸುವುದಾಗಿ ಭರವಸೆ ನೀಡಿದ್ದೀರಿ. ಆದರೆ, ಈಗಿನ ಸ್ಥಿತಿ ನೋಡುವಾಗ ಆ ವೇಳೆಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇಲ್ಲ. ಹಾಗಾಗಿ ಯಾವಾಗ ಕಾಮಗಾರಿ ಮುಗಿಸುತ್ತೀರಿ ಎಂದು 10 ದಿನದೊಳಗೆ ಅಫಿದಾವಿತ್ ಮಾಡಿಸಿಕೊಡಬೇಕು. ಇಲ್ಲದಿದ್ದರೆ ಕಾನೂನು ಉಲ್ಲಂಘಿಸಿಯಾದರೂ ಸರಿ, ಟೋಲ್‌ಗೇಟ್ ಬಂದ್ ಮಾಡುವುದಾಗಿ ನಳಿನ್ ಹೇಳಿದರಲ್ಲದೆ, ನವಯುಗ ಕಂಪೆನಿಯ ಅಧಿಕಾರಿಯನ್ನು ತರಾಟೆಗೆ ತೀವ್ರ ತೆಗೆದುಕೊಂಡರು.
ಮುಂದಿನ ಜನವರಿಯೊಳಗೆ ಪ್ರಧಾನಿಯನ್ನು ಕರೆಸಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಬೇಕೆಂದಿದ್ದೆ. ನೀವೀಗ ಮುಂದಿನ ಜೂನ್ ವೇಳೆಗೆ ಬಿಟ್ಟುಕೊಡುವುದಾಗಿ ಹೇಳುತ್ತೀರಿ. ಅಷ್ಟರವರೆಗೆ ಕಾಯುವ ಸ್ಥಿತಿಯಲ್ಲಿ ನಾವ್ಯಾರೂ ಇಲ್ಲ. ಈಗಾಗಲೆ ವಿಳಂಬ ಕಾಮಗಾರಿಗೆ 1.20 ಕೋ.ರೂ. ದಂಡ ಹಾಕಿದರೂ ಕೂಡ ನೀವು ಪಾಠ ಕಲಿತಿಲ್ಲ. ಹಾಗಾಗಿ ನಿಮ್ಮ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರೇ ಮಂಗಳೂರಿಗೆ ಬಂದು ಜಿಲ್ಲಾಧಿಕಾರಿ ಸಹಿತ ನನ್ನೊಂದಿಗೆ ಚರ್ಚೆ ನಡೆಸಲಿ ಎಂದು ನಳಿನ್ ಕುಮಾರ್ ಕಟೀಲ್ ತಾಕೀತು ಮಾಡಿದರು.
ಹೊಂಡಗಳನ್ನು ಮುಚ್ಚಿ
ಮಳೆಗಾಲಕ್ಕೆ ಮುನ್ನ ರಾ.ಹೆ.ಯ ಹೊಂಡಗಳನ್ನು ಮುಚ್ಚಿಸಬೇಕಿತ್ತು. ಹೆದ್ದಾರಿ ಬದಿಯ ತೋಡುಗಳ ಹೂಳೆತ್ತಬೇಕಿತ್ತು. ಚರಂಡಿಯ ವ್ಯವಸ್ಥೆ ಮಾಡಬೇಕಿತ್ತು. ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕಿತ್ತು. ಆದರೆ ತಾವು ಇದ್ಯಾವುದನ್ನೂ ಮಾಡದ ಕಾರಣ ಮೇ 29ರಂದು ಸುರಿದ ಭಾರೀ ಮಳೆಗೆ ಮಂಗಳೂರು ಮುಳುಗುವಂತಾಯಿತು. ಕರಾವಳಿಯಲ್ಲಿ ಮಳೆ ಹೇಗೆ ಸುರಿಯುತ್ತದೆ ಎಂದು ಗೊತ್ತಿದ್ದೂ ಕೂಡಾ ಇಂತಹ ನಿರ್ಲಕ್ಷ್ಯ ವಹಿಸಿದ್ದು ಸರಿಯಲ್ಲ. ಹಾಗಾಗಿ ಹೆದ್ದಾರಿಯ ಹೊಂಡಗಳನ್ನು ಶೀಘ್ರ ಮುಚ್ಚಬೇಕು. ಎಲ್ಲೆಲ್ಲಿ ಚರಂಡಿಗಳಿವೆ ಎಂಬುದನ್ನು ತಿಳಿದುಕೊಂಡು ಕ್ಷಿಪ್ರಗತಿಯಲ್ಲಿ ಕೆಲಸ ಆರಂಭಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಸೂಚಿಸಿದರು.
ಪಡೀಲ್ ಕೆಳಸೇತುವೆಯಲ್ಲಿ ಎದುರಾಗುತ್ತಿರುವ ಸಮಸ್ಯೆಯ ಪರಿಹಾರಕ್ಕೆ ರಾ.ಹೆ.ಪ್ರಾಧಿಕಾರದ ಅಧಿಕಾರಿಗಳು ಮತ್ತು ಮನಪಾ ಅಧಿಕಾರಿಗಳು ಜಂಟಿ ಪರೀಶಿಲನೆ ನಡೆಸಿ ಕ್ರಮಗಳನ್ನು ಕೈಗೊಳ್ಳಬೇಕು. ನಂತೂರು ಸರ್ಕಲ್ ಬಳಿ ಅಪಘಾತ ಸಂಭವಿಸಲು ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂಬ ಆರೋಪವಿರುವ ಕಾರಣ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಸುರತ್ಕಲ್-ಬಂಟ್ವಾಳ ಹೆದ್ದಾರಿಯ ನಿರ್ವಹಣೆಗೆ 8 ಕೋ.ರೂ. ವ್ಯಯಿಸಿದರೂ ಕೂಡಾ ಹೆದ್ದಾರಿಯಲ್ಲಿ ಹೊಂಡ ಮಾಯವಾಗಿಲ್ಲ ಎಂಬ ಆರೋಪವಿದೆ. ತುಂಬೆಯ ರಾಮಲ್‌ಕಟ್ಟೆ, ಬಿ.ಸಿ.ರೋಡ್, ನಂತೂರು, ಪಡೀಲ್, ಪಂಪ್‌ವೆಲ್, ತೊಕ್ಕೊಟ್ಟು ಜಂಕ್ಷನ್‌ಗಳ ಸಮಸ್ಯೆಯನ್ನು ನಿಭಾಯಿಸಲು ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿ.ಸಿ.ರೋಡ್-ಪೂಂಜಾಲಕಟ್ಟೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಟೆಂಡರ್ ಆಗಿದ್ದು, ಮಳೆಗಾಲದ ಬಳಿಕ ಕೆಲಸ ಪ್ರಾರಂಭಿಸಲಾಗುವುದು. ಮತ್ತು 33 ಕೋ.ರೂ. ವೆಚ್ಚದಲ್ಲಿ ಗುರುಪುರ ಹೊಸ ಸೇತುವೆಗೆ ಸಂಬಂಧಿಸಿದಂತೆ ಮಳೆಗಾಲದ ಬಳಿಕ ಟೆಂಡರ್ ಕರೆಯಲಾಗುವುದು ಎಂದು ರಾ.ಹೆ. ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಾರ್ಪೊರೇಟರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







