ಸುರಕ್ಷಿತ ನೀರು ಸಿಗದೆ ವಾರ್ಷಿಕ 2 ಲಕ್ಷ ಜನರ ಸಾವು!
ನೀರು ಪೋಲು ಮಾಡುವ ಮುನ್ನ ಈ ವರದಿ ಓದಿ

ಹೈದರಾಬಾದ್, ಜೂ.21: ಭಾರತ ಒಟ್ಟಾರೆಯಾಗಿ ಉಪಯೋಗಿಸುವ ನೀರಿನ ಅಗತ್ಯದಲ್ಲಿ ಕೃಷಿಗಾಗಿ ಬಳಸುವ ಭಾಗವನ್ನು ಶೇ. 50ರಷ್ಟು ಕಡಿಮೆ ಮಾಡಬೇಕು ಮತ್ತು ಒಂದು ಹನಿಯನ್ನು ಕೂಡಾ ಉಳಿಸಲು ಪ್ರಯತ್ನ ನಡೆಸಬೇಕು ಎಂದು ಖ್ಯಾತ ವಿಜ್ಞಾನಿ ಮತ್ತು ಇಸ್ರೋದ ಮಾಜಿ ಮುಖ್ಯಸ್ಥ ಕೆ. ಕಸ್ತೂರಿ ರಂಗನ್ ತಿಳಿಸಿದ್ದಾರೆ.
ಭಾರತವು ತನ್ನ ಇತಿಹಾಸದಲ್ಲೇ ಅತ್ಯಂತ ಭೀಕರ ಜಲಸಮಸ್ಯೆಯಿಂದ ಬಳಲುತ್ತಿದೆ. ದೇಶದ 60 ಕೋಟಿ ಜನರು ತೀವ್ರ ಜಲಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ವಾರ್ಷಿಕ ಎರಡು ಲಕ್ಷ ಮಂದಿ ಸುರಕ್ಷಿತ ನೀರು ಸರಿಯಾಗಿ ಸಿಗದ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಕಳೆದ ವಾರ ನೀತಿ ಆಯೋಗ ನೀಡಿದ ವರದಿಯಲ್ಲಿ ತಿಳಿಸಲಾಗಿದೆ. 2030ರ ವೇಳೆಗೆ ದೇಶದ ನೀರಿನ ಬೇಡಿಕೆಯು ಪೂರೈಕೆ ಪ್ರಮಾಣದ ದುಪ್ಪಟ್ಟಾಗುವ ಸಾಧ್ಯತೆಯಿದೆ. ಇದರಿಂದ ಮಿಲಿಯನ್‌ಗಟ್ಟಲೆ ಜನರು ನೀರಿನ ಕೊರತೆಯನ್ನು ಎದುರಿಸಲಿದ್ದಾರೆ ಹಾಗೂ ದೇಶದ ಜಿಡಿಪಿಯಲ್ಲಿ ಶೇ. 6 ನಷ್ಟವಾಗಲಿದೆ ಎಂದು ವರದಿ ತಿಳಿಸಿದೆ.
ವಿವಿಧ ಸ್ವತಂತ್ರ ಸಂಸ್ಥೆಗಳ ಅಂಕಿಅಂಶಗಳನ್ನು ಉಲ್ಲೇಖಿಸಿರುವ ವರದಿಯು, ದೇಶದ ಶೇ.70 ನೀರಿನ ಮೂಲಗಳು ಮಲಿನಗೊಂಡಿರುವ ಪರಿಣಾಮವಾಗಿ ಜಲ ಗುಣಮಟ್ಟ ಸೂಚಿಯಲ್ಲಿರುವ ಭಾರತ 120ನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ. ಹಲವು ದೇಶಗಳಲ್ಲಿ ಒಟ್ಟಾರೆ ಉಪಯೋಗಿಸುವ ನೀರಿನ ಪ್ರಮಾಣದಲ್ಲಿ ಶೇ.50ನ್ನು ಕೃಷಿಗಾಗಿ ಬಳಸಲಾಗುತ್ತದೆ. ಭಾರತದಲ್ಲಿ ಈ ಪ್ರಮಾಣ ಶೇ.80-85ರಷ್ಟಿದೆ. ಇದನ್ನು ಶೇ. 50 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣಕ್ಕೆ ತರಬೇಕು ಎಂದು ಕಸ್ತೂರಿ ರಂಗನ್ ಸಲಹೆ ನೀಡಿದ್ದಾರೆ.







