ವಿಮಾನ ನಿಲ್ದಾಣದಲ್ಲಿ ಐದು ಕೋಟಿ ರೂ. ಮೌಲ್ಯದ ರಕ್ತಚಂದನ ವಶ

ಸಾಂದರ್ಭಿಕ ಚಿತ್ರ
ಚೆನ್ನೈ, ಜೂ.21: ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಚೆನ್ನೈ ವಿಭಾಗದ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ 5.28 ಕೋಟಿ ರೂ. ಮೌಲ್ಯದ 11.75 ಟನ್ ರಕ್ತಚಂದನವನ್ನು ವಶಪಡಿಸಿಕೊಂಡಿದ್ದಾರೆ. ನಿಖರ ಮಾಹಿತಿಯ ಮೇರೆಗೆ ಚೀನಾದ ಶಾಂಘೈಗೆ ಸಾಗಿಸಲಾಗುತ್ತಿದ್ದ ಕಂಟೈನರ್ನ ತಪಾಸಣೆ ನಡೆಸಿದ ಅಧಿಕಾರಿಗಳು ಬೃಹತ್ ಪ್ರಮಾಣ ರಕ್ತಚಂದನದ ಕಳ್ಳಸಾಗಾಟವನ್ನು ತಡೆದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜೂನ್ 8ರಂದು ವಿಮಾನ ನಿಲ್ದಾಣಕ್ಕೆ ತರಲಾಗಿದ್ದ ಕಂಟೈನರ್ಗಳಲ್ಲಿ ರಬ್ಬರ್ ಹೈಡ್ರಾಲಿಕ್ ಪೈಪ್ಗಳು ಎಂದು ಬರೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಶಪಡಿಸಿಕೊಂಡ ಕಂಟೈನರ್ನ ಕೂಲಂಕುಷ ತಪಾಸಣೆ ನಡೆಸಿದಾಗ ಒಳಗೆ ರಕ್ತಚಂದನವನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಡಿಆರ್ಐ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ತನಿಖೆಯ ವೇಳೆ, ಖಾಸಗಿ ರಫ್ತುದಾರ ಸಂಸ್ಥೆಯು ಕಸ್ಟಮ್ಸ್ ಇಲಾಖೆಯಿಂದ ಅನುಮತಿಯನ್ನು ಪಡೆಯುವ ಸಲುವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





