ಅಧಿಕಾರಿಗಳಿಗೆ ಹಣ ನೀಡದೆ ಕೆಲಸ ಮಾಡಿಕೊಡುವುದಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ: ಹೈಕೋರ್ಟ್

ಬೆಂಗಳೂರು, ಜೂ.21: ಹಣ ನೀಡದ ಹೊರತು ಅಧಿಕಾರಿಗಳು ಪ್ರಾಮಾಣಿಕ ಜನರ ಕೆಲಸಗಳನ್ನು ಮಾಡಿಕೊಡುವುದಿಲ್ಲ ಎಂಬ ಭಾವನೆ ಇಡೀ ದೇಶದಲ್ಲಿದೆ. ಸಾರ್ವಜನಿಕರಲ್ಲಿ ಇಂತಹ ಭಾವನೆ ಮೂಡಲು ಅಧಿಕಾರಿಶಾಹಿಯ ಕಾರ್ಯ ವೈಖರಿಯೇ ಕಾರಣ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕುಣಿಗಲ್ ತಾಲೂಕಿನಲ್ಲಿ ಟಿ.ಮರಿಗೌಡ ಸೇರಿದಂತೆ ಮೂವರಿಗೆ ಸೇರಿದ ಜಮೀನಿನ ಸರ್ವೇ ನಡೆಸಿ ಬೇಲಿ ಹಾಕುವಂತೆ ಹೈಕೋರ್ಟ್ ನೀಡಿದ್ದ ನಿರ್ದೇಶನ ಪಾಲಿಸದ ಹಿನ್ನೆಲೆಯಲ್ಲಿ ಕುಣಿಗಲ್ ತಹಸೀಲ್ದಾರ್ ನಾಗರಾಜ್ ಹಾಗೂ ಭೂ ದಾಖಲಾತಿ ಹಾಗೂ ಸರ್ವೇ ಸಟ್ಲಮೆಂಟ್ ವಿಭಾಗದ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಯ ಹಿಂದಿನ ವಿಚಾರಣೆ ವೇಳೆ ಕುಣಿಗಲ್ ಉಪವಿಭಾಗಾಧಿಕಾರಿ ಶಿವಕುಮಾರ್ ಅವರ ಸಮ್ಮುಖದಲ್ಲಿ ಅರ್ಜಿದಾರರ ಜಮೀನಿನ ಸರ್ವೇ ನಡೆಸಬೇಕೆಂದು ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಉಪ ವಿಭಾಗಾಧಿಕಾರಿ ಸೂಕ್ತವಾಗಿ ಪಾಲಿಸಿರಲಿಲ್ಲ. ಅಲ್ಲದೆ, ತಹಸೀಲ್ದಾರ್ ನಾಗರಾಜ್, ಜಮೀನನ್ನು ಅನಂತಾಶ್ರಮ ಮಠಕ್ಕೆ ಮಾರಾಟ ಮಾಡಲು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಅರ್ಜಿದಾರರು ಕೋರ್ಟ್‌ಗೆ ದೂರಿದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ರಾಘವೇಂದ್ರ ಚೌವ್ಹಾಣ್ ಮತ್ತು ನ್ಯಾಯಮೂರ್ತಿ ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ವಿವಾದಿತ ಜಮೀನಿನ ಸರ್ವೇ ನಡೆಸಬೇಕು ಎಂದು ತಹಸೀಲ್ದಾರ್ ಅವರೇ ಈ ಹಿಂದೆ ಆದೇಶಿಸಿದ್ದರು. ಆದರೆ, ಸರ್ವೇ ನಡೆಸಲಿಲ್ಲ. ನಂತರ ಹೈಕೋರ್ಟ್ ಸಹ ನಿರ್ದೇಶಿಸಿದ್ದರೂ ಸರ್ವೇ ನಡೆಸಿ ಬೇಲಿ ಹಾಕಿಲ್ಲ. ಅದಕ್ಕೆ ಕಾರಣವೇನು? ಮತ್ತೊಂದೆಡೆ ಜಮೀನನ್ನು ಮಠಕ್ಕೆ ಮಾರಾಟ ಮಾಡಲು ತಹಸೀಲ್ದಾರ್ ಏಕೆ ಒತ್ತಡ ಹೇರುತ್ತಾರೆ? ಎಂದು ಸರಕಾರಿ ವಕೀಲರನ್ನು ಪ್ರಶ್ನಿಸಿದರು.
ತಹಸೀಲ್ದಾರ್ ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸದೇ ಇರುವುದಕ್ಕೆ ಮೂರು ಕಾರಣಗಳಿವೆ ಎಂದು ಕೋರ್ಟ್ ಭಾವಿಸುತ್ತಿದೆ. ಒಂದು ಕರ್ತವ್ಯಲೋಪ, ಎರಡನೆಯದು ಮಠದ ಜೊತೆಗೆ ತಹಸೀಲ್ದಾರ್ ಕೈ ಜೋಡಿಸಿರಬೇಕು. ಮೂರನೆಯದು ತಹಸೀಲ್ದಾರ್‌ಗೆ ಅರ್ಜಿದಾರರು ಹಣ ನೀಡದಿರುವುದು. ಇದಕ್ಕಾಗಿಯೇ, ಹಣ ನೀಡದ ಹೊರತು ಅಧಿಕಾರಿಗಳು ಪ್ರಾಮಾಣಿಕ ಜನರ ಕೆಲಸಗಳನ್ನು ಮಾಡಿಕೊಡುವುದಿಲ್ಲ. ಅಧಿಕಾರಿಗಳು ಕೆಲಸ ಮಾಡಬೇಕೆಂದರೆ ಹಣ ನೀಡಬೇಕು ಇಲ್ಲವೇ ಪ್ರಭಾವ ಬಳಸಿ ಒತ್ತಡ ಹೇರಬೇಕು ಎಂಬ ಭಾವನೆ ಇಡೀ ದೇಶದಲ್ಲಿ ಇದೆ. ಇಂತಹ ಭಾವನೆ ಮೂಡಲು ಅಧಿಕಾರಿಶಾಹಿ ವ್ಯವಸ್ಥೆಯ ಕಾರ್ಯವೈಖರಿಯೇ ಕಾರಣ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಅಂತಿಮವಾಗಿ ಹೈಕೋರ್ಟ್ ಆದೇಶವನ್ನು ಏಕೆ ಪಾಲಿಸಿಲ್ಲ? ಎಂಬುದರ ಕುರಿತು ವಿವರಣೆ ನೀಡಲು ಕುಣಿಗಲ್ ಉಪ ವಿಭಾಗಾಧಿಕಾರಿ ಶಿವಕುಮಾರ್ ಮತ್ತು ತಹಶೀಲ್ದಾರ್ ನಾಗರಾಜ್ ಅವರು ಜೂನ್ 26ರಂದು ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.







