ಬಜೆಟ್ ಸಿದ್ಧತೆಗೆ ಮುಖ್ಯಮಂತ್ರಿ ಪೂರ್ವಭಾವಿ ಸಭೆ

ಬೆಂಗಳೂರು, ಜೂ. 21: ಬಜೆಟ್ ಮಂಡನೆಗೆ ಮೈತ್ರಿ ಸರಕಾರದ ಮುಖಂಡರ ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಈ ಮಧ್ಯೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ, ಆರೋಗ್ಯ, ಜಲಸಂಪನ್ಮೂಲ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಕಂದಾಯ, ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದರು.
ಗುರುವಾರ ಇಲ್ಲಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಗಮದ ಕೇಂದ್ರ ಕಚೇರಿ ಶಕ್ತಿಭವನದಲ್ಲಿ ವಿವಿಧ ಇಲಾಖೆ ಮುಖ್ಯಸ್ಥರುಗಳ ಜತೆ ಬಜೆಟ್ ಪೂರ್ವಭಾವಿ ಸಭೆ ಆರಂಭಿಸಿದ್ದು, ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಬಜೆಟ್ ರೂಪುರೇಷೆಗಳ ಕುರಿತು ಚರ್ಚಿಸಿದರು.
‘ಹಿಂದಿನ ಸರಕಾರ ಬಜೆಟ್ ಮಂಡಿಸಿರುವುದರಿಂದ ಮೈತ್ರಿ ಸರಕಾರ ಬಜೆಟ್ ಮಂಡನೆ ಅಗತ್ಯವಿಲ್ಲ. ಪೂರಕ ಬಜೆಟ್ ಮಂಡಿಸಿದರೆ ಸಾಕು’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಆದರೆ, ಸಿಎಂ ಕುಮಾರಸ್ವಾಮಿ, ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಹೊಸದಾಗಿ ಬಜೆಟ್ ಮಂಡನೆ ಮಾಡಲಾಗುವುದು ಎಂದು ಹೇಳಿದ್ದರು.
ಬಜೆಟ್ ಮಂಡನೆ ಸಂಬಂಧ ವಿವಾದಕ್ಕೆ ಗ್ರಾಸವಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಬಜೆಟ್ ಮಂಡನೆ ಅಗತ್ಯತೆ ಮನವರಿಕೆ ಮಾಡಿಕೊಟ್ಟಿದ್ದರಲ್ಲದೆ, ಹೊಸದಾಗಿ ಬಜೆಟ್ ಮಂಡನೆಗೆ ಒಪ್ಪಿಗೆಯನ್ನು ಪಡೆದುಕೊಂಡು ಬಂದಿದ್ದರು. ಹೀಗಾಗಿ ಇಂದಿನಿಂದ ಆಯವ್ಯಯ ಪೂರ್ವಭಾವಿ ಸಭೆ ಆರಂಭಿಸಿದ್ದು, ಜೂ.30ರ ವರೆಗೆ ಪೂರ್ವಭಾವಿ ಸಭೆಯನ್ನು ನಡೆಸಲಿದ್ದಾರೆ. ಜುಲೈ ಮೊದಲ ವಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
ಭವಿಷ್ಯ ನಿಧಿ ಮಾರ್ಪಾಡಿಗೆ ಸಲಹೆ: ರಾಮನಗರ, ತುಮಕೂರಿನಲ್ಲಿ ಕಾರ್ಮಿಕ ಭವನ ನಿರ್ಮಾಣ ಮತ್ತು ಕಾರ್ಮಿಕ ಭವಿಷ್ಯ ನಿಧಿಯಲ್ಲಿ ಮಾರ್ಪಾಡು ಮಾಡುವ ಬಗ್ಗೆ ಸಲಹೆ ಕೊಡಲಾಗಿದೆ. ಭವಿಷ್ಯ ನಿಧಿ ಸಂಬಂಧ ವಿಮಾ ಕಂಪೆನಿಗೆ ಹಣ ಕಟ್ಟುತ್ತಿದ್ದೆವು. ಆದರೆ, ಆ ಹಣವನ್ನು ಸರಕಾರವೇ ಇಟ್ಟುಕೊಳ್ಳುವ ಚಿಂತನೆ ನಡೆಸಿದ್ದೇವೆ ಎಂದು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.







