'ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ'
ಬೆಂಗಳೂರು, ಜೂ.21: ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಯಾವುದೇ ಕಾರಣಕ್ಕೂ ಮುಷ್ಕರ ಕೈಬಿಡುವುದಿಲ್ಲ ಎಂದು ಅಖಿಲ ಭಾರತ ಸರಕು ಸಾಗಣೆ ವಾಹನಗಳ ಮಾಲಕರ ಸಂಘಗಳ ಮಹಾ ಒಕ್ಕೂಟ ಅಧ್ಯಕ್ಷ ಬಿ.ಚನ್ನಾರೆಡ್ಡಿ ಹೇಳಿದ್ದಾರೆ.
ಗುರುವಾರ ನಗರದ ಯಶವಂತಪುರದಲ್ಲಿರುವ ಟ್ರಕ್ ಟರ್ಮಿನಲ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರಕಾರ ಅವೈಜ್ಞಾನಿಕವಾಗಿ ಪೆಟ್ರೋಲ್, ಡೀಸೆಲ್ನ 3ನೇ ಪಾರ್ಟಿ ಪ್ರೀಮಿಯಂ ದರವನ್ನು ಹೆಚ್ಚಳ ಮಾಡಿದೆ. ಇದರ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರವನ್ನು ಬೇಡಿಕೆ ಈಡೇರುವವರೆಗೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜೂ.18ರಿಂದ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದು, ಇಂದಿಗೆ(ಜೂ.21)ಕ್ಕೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಹೀಗಿದ್ದರೂ ಸಹ ಕೂಡಾ ಕೇಂದ್ರ ಸರಕಾರದಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋಪಾಲ ಸ್ವಾಮಿ ಮಾತನಾಡಿ,ನಾವು ಯಾರಿಗೂ ಅನ್ಯಾಯ ಮಾಡುತ್ತಿಲ್ಲ. ಬದಲಾಗಿ ನಮಗೆ ಹೊರೆಯಾಗುತ್ತಿರುವ ಡಿಸೇಲ್ ಹಾಗೂ ಪೆಟ್ರೋಲ್ ದರ ಪರಿಷ್ಕರಣೆ ಬಗ್ಗೆ ಕೇಂದ್ರ ಸರಕಾರ ಲಾರಿ ಮಾಲಕರ ಸಭೆ ಕರೆದು ಮತುಕತೆ ನಡೆಸುವವರೆಗೂ ಶಾಂತಿಯುತವಾಗಿ ಮುಷ್ಕರ ಮುಂದುವರೆಸುತ್ತೇವೆ ಎಂದು ಹೇಳಿದರು.







