ಜೂ. 25ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಉದ್ಘಾಟನೆ
ದ.ಕ. ಜಿಲ್ಲೆಯ ಪ್ರಪ್ರಥಮ "ಅಟಲ್ ಟಿಂಕರಿಂಗ್ ಲ್ಯಾಬ್"

ಬಂಟ್ವಾಳ, ಜೂ. 21: ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ "ಅಟಲ್ ಟಿಂಕರಿಂಗ್ ಲ್ಯಾಬ್" ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಜೂ. 25ರಂದು ಉದ್ಘಾಟನೆಗೊಳ್ಳಲಿದೆ.
ಕೇಂದ್ರ ಸರಕಾರದ ನೀತಿ ಆಯೋಗದ ಅಟಲ್ ಇನೋವೇಷನ್ ಮಿಷನ್ ಯೋಜನೆ ಅಡಿಯಲ್ಲಿ ಈ ಲ್ಯಾಬ್ ಸ್ಥಾಪನೆಯಾಗಲಿದ್ದು, ಶಾಲೆಯ ಮೂಲಸೌಕರ್ಯ, ವೈಜ್ಞಾನಿಕ ಚಟುವಟಿಕೆಗಳು ಹಾಗೂ ಹಿನ್ನೆಲೆಯ ಆಧಾರದಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗ ಈ ಯೋಜನೆಗಾಗಿ ಶ್ರೀರಾಮ ವಿದ್ಯಾಕೇಂದ್ರವನ್ನು ಆಯ್ಕೆ ಮಾಡಿದೆ ಎಂದು ಕಲ್ಲಡ್ಕ ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
ಏನಿದು.. ಅಟಲ್ ಟಿಂಕರಿಂಗ್?:
6 ರಿಂದ 12 ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕ್ಷೇತ್ರದ ಕುರಿತಾಗಿ ಕುತೂಹಲ, ಆಸಕ್ತಿಯನ್ನು ಹೆಚ್ಚಿಸಿ, ಅದನ್ನು ಉತ್ತೇಜಿಸುವುದು ಈ ಪ್ರಯೋಗಾಲಯದ ಮುಖ್ಯ ಆಶಯ. ಜೊತೆಗೆ ಹೊಸಹೊಸ ಸಂಶೋಧನೆಗಳನ್ನು ಮಾಡುವ ಯುವ ವಿಜ್ಞಾನಿಗಳಿಗೆ ಅದಕ್ಕೆ ಪೂರಕವಾದ ಮಾಹಿತಿ, ಮಾರ್ಗದರ್ಶನವನ್ನು ನೀಡುವುದು, ವೈಜ್ಞಾನಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಪ್ರೇರೇಪಿಸುವುದು ಮೊದಲಾದ ಉದ್ದೇಶಗಳನ್ನು ಈ ಯೋಜನೆ ಹೊಂದಿದೆ. ಸೈನ್ಸ್(ವಿಜ್ಞಾನ), ಟೆಕ್ನಾಲಜಿ(ತಂತ್ರಜ್ಞಾನ), ಇಂಜಿನಿಯರಿಂಗ್, ಮೆಥಮೆಟಿಕ್ಸ್(ಗಣಿತಶಾಸ್ತ್ರ) ವಿಚಾರ ಜೊತೆಯಾಗಿ ಸ್ಟೆಮ್ ಹೆಸರಿನಲ್ಲಿ ಮಕ್ಕಳಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುವ ಮೂಲ ಉದ್ದೇಶ ಇರಿಸಿಕೊಂಡಿದೆ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ 2,500 ಚದರ ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ಈ ಲ್ಯಾಬ್ ನಿರ್ಮಾಣ ಗೊಳ್ಳುತ್ತಿದ್ದು, ಪೂರ್ವಭಾವಿ ಕೆಲಸಗಳು ಭರದಿಂದ ಸಾಗಿದೆ. ಪ್ರಸ್ತುತ 3ಡಿ ಪ್ರಿಂಟರ್, ರೋಬೋಟ್‌ಗಳು, 35 ಕ್ಕೂ ಅಧಿಕ ಸೆನ್ಸಾರ್‌ಗಳು ಸೇರಿದಂತೆ ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳು, ಪ್ರಯೋಗ ಮಾಪನಗಳು, ವಸ್ತುಗಳು ಇಲ್ಲಿ ಪ್ರಯೋಗಕ್ಕೆ ಒದಗಲಿದೆ.
ಉದ್ಘಾಟನೆಗೊಂಡ ಬಳಿಕ ವಾರದ ಆರು ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ದಿನದಲ್ಲಿ 8ಗಂಟೆಗಳ ಕಾಲ ಈ ಲ್ಯಾಬ್ ಕಾರ್ಯನಿರ್ವಹಿಸಲಿದ್ದು, ತಾಲೂಕಿನ ಯಾವುದೇ ಶಾಲೆಯ ವಿದ್ಯಾರ್ಥಿಗಳಿಗೆ(6-12 ತರಗತಿ)ಈ ಪ್ರಯೋಗಾಲಯ ವಿಜ್ಞಾನದ ಕೆಲಸಗಳಿಗೆ ಒದಗಿಬರಲಿದೆ ಎಂದು ಮಾಹಿತಿ ನೀಡಿದೆ.
ಜೂ.25 ಲೋಕಾರ್ಪಣೆ-ಸಂವಾದ:
ಕಲ್ಲಡ್ಕ ಹನುಮಾನ್ ನಗರದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಆರಂಭಗೊಳ್ಳಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೊಟ್ಟಮೊದಲ ವಿಜ್ಞಾನ ಪ್ರಯೋಗಾಲಯ "ಅಟಲ್ ಟಿಂಕರಿಂಗ್ ಲ್ಯಾಬ್" ಅನ್ನು ಭಾರತೀಯ ಬಾಹ್ಯಾಖಾಶ ಸಂಶೋಧನಾ ಸಂಸ್ಥೆ ಇಸ್ರೋದ ಪೂರ್ವಾಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಉದ್ಘಾಟಿಸಲಿದ್ದು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾಂಗ ಉಪನಿರ್ದೇಶಕ ವೈ.ಶಿವರಾಮಯ್ಯ , ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭ 6-10ನೆ ತರಗತಿ ವಯೋಮಾನದ ವಿದ್ಯಾರ್ಥಿಗಳ ಜೊತೆ ವಿದ್ಯಾರ್ಥಿ -ವಿಜ್ಞಾನಿ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ತಿಳಿಸಿದ್ದಾರೆ.
ಯುವಮನಸ್ಸುಗಳಲ್ಲಿ ಸೃಜನಶೀಲತೆ, ಕುತೂಹಲ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಮೂಡಿಸುವ ಸಲುವಾಗಿ ನಮ್ಮ ವಿದ್ಯಾಸಂಸ್ಥೆಯಲ್ಲಿ ಭಾರತ ಸರ್ಕಾರದ ನೀತಿ ಆಯೋಗದ ನೆರವಿನಲ್ಲಿ ಸ್ಥಾಪನೆಯಾಗಲಿರುವ "ಅಟಲ್ ಟಿಂಕರಿಂಗ್ ಲ್ಯಾಬ್" ಯುವ ವಿಜ್ಞಾನಿಗಳನ್ನು ಸೃಷ್ಟಿಸಲು ಪ್ರೇರಣೆಯಾಗಲಿದೆ.
- ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಪ್ರಾಂಶುಪಾಲರು, ಶ್ರೀರಾಮ ಪದವಿ ಕಾಲೇಜು-ಕಲ್ಲಡ್ಕ







