ಉತ್ತರ ಕರ್ನಾಟಕ ಮೂಲದ ಯುವತಿಯ ಅತ್ಯಾಚಾರ ಆರೋಪ: ಓರ್ವ ಸೆರೆ

ಮಂಗಳೂರು, ಜೂ.21: ಉತ್ತರ ಕರ್ನಾಟಕದ ಕುಷ್ಟಗಿಯಿಂದ ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ಬಂದಿದ್ದ 19ರ ಪ್ರಾಯದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭವತಿ ಮಾಡಿದ ಘಟನೆ ಸಮೀಪದ ಪಾಲ್ದನೆಯಲ್ಲಿ ನಡೆದಿದ್ದು, ಈ ಬಗ್ಗೆ ಆರೋಪಿ ರಾಮ ಯಾನೆ ದಾಸಯ್ಯ (38) ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆರೋಪಿ ರಾಮ ಯಾನೆ ದಾಸಯ್ಯ ಕೂಡ ಕುಷ್ಟಗಿ ನಿವಾಸಿಯಾಗಿದ್ದು, ಕೆಲವು ವರ್ಷಗಳಿಂದ ಮಂಗಳೂರು ನಗರದಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತಿ ದ್ದಾನೆ. ಕೆಲ ಸಮಯದಿಂದ ಆತ ಪಾಲ್ದನೆ ವ್ಯಾಪ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತಿದ್ದು, ಎರಡು ವರ್ಷಗಳ ಹಿಂದೆ ಬಂದಿದ್ದ ಯುವತಿಯ ಕುಟುಂಬವೂ ಪಾಲ್ದನೆ ವ್ಯಾಪ್ತಿಯಲ್ಲಿ ವಾಸವಾಗಿತ್ತು.
ದಾಸಯ್ಯ ಮತ್ತು ಯುವತಿ ಸಲುಗೆಯಿಂದ ಇದ್ದು, ಇದನ್ನು ದುರುಪಯೋಗ ಪಡಿಸಿಕೊಂಡ ಆರೋಪಿ ದಾಸಯ್ಯ ಆಕೆಯ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಆಕೆ ಗರ್ಭವತಿಯಾಗಿದ್ದು, ವಿಷಯ ತಿಳಿದ ತಕ್ಷಣ ಯುವತಿ ಮನೆಯವರು ದಾಸಯ್ಯನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದಾಸಯ್ಯನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಗುರುವಾರ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.





