ಮಡಿಕೇರಿ: ಕೂಡಿಗೆ ಸೈನಿಕ ಶಾಲೆಯಲ್ಲಿ ಯೋಗ ದಿನಾಚರಣೆ

ಮಡಿಕೇರಿ, ಜೂ.21: ‘ಯೋಗಾಸನ’ ಎನ್ನುವುದು ಭಾರತ ದೇಶ ವಿಶ್ವಕ್ಕೆ ನೀಡಿರುವ ಕೊಡಗೆಯಾಗಿದೆಯೆಂದು ನಿವೃತ್ತ ಕ್ಯಾಪ್ಟನ್ ಸುಮಿಷಾ ಶಂಕರ್ ತಿಳಿಸಿದ್ದಾರೆ.
ಕೂಡಿಗೆ ಸೈನಿಕ ಶಾಲೆಯಲ್ಲಿ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಎನ್ನುವುದು ಆರೋಗ್ಯ ಸಂರಕ್ಷಣೆಗೆ ಪೂರಕವಾದ ಶಿಸ್ತುಬದ್ಧ ವ್ಯವಸ್ಥೆಯಾಗಿದೆಯೆಂದು ಹೇಳಿದರು.
ಯೋಗ ಒಂದು ವೈಜ್ಞಾನಿಕ ಕಲೆಯಾಗಿದ್ದು, ಮನುಷ್ಯನ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಮನಸ್ಸು ಮತ್ತು ದೇಹವನ್ನು ಸಜ್ಜುಗೊಳಿಸುತ್ತದೆ. ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಯೋಗವು ಪ್ರಮುಖ ಪಾತ್ರವಹಿಸುತ್ತದೆಂದು ತಿಳಿಸಿ, ಪ್ರತಿಯೊಬ್ಬರು ತಮ್ಮ ದೈನಂದಿನ ಬದುಕಿನಲ್ಲಿ ಯೋಗವನ್ನು ಆಚರಿಸಲು ಕರೆ ನೀಡಿದರು.
ಶಾಲಾ ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಟಿಯವರು ಯೋಗದ ಮಹತ್ವವನ್ನು ಕುರಿತು ಮಾತನಾಡಿದರು. ನಂತರ ಪ್ರಧಾನಿ ನರೇಂದ್ರ ಮೋದಿಯವರ ಯೋಗ ಕುರಿತಾದ ಸಂದೇಶವನ್ನು ಬಿತ್ತರಿಸಲಾಯಿತು.
ಅಂತರಾಷ್ಟ್ರೀಯ ಯೋಗ ದಿನದ ಘೋಷ ವಾಕ್ಯವಾದ ‘ಶಾಂತಿಗಾಗಿ ಯೋಗ’ವನ್ನು ಪ್ರಚುರ ಪಡಿಸಲಾಯಿತು. ಕೇಂದ್ರ ಸರ್ಕಾರದ ಆಯುಷ್ ಇಲಾಖೆಯಿಂದ ನಿಗದಿಪಡಿಸಿದ ಯೋಗದ ನಿರ್ದಿಷ್ಟ ಮಾರ್ಗದರ್ಶಿಯನ್ನು ಆಧರಿಸಿ ಯೋಗ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಯೋಗಾಸನಗಳ ಪ್ರದರ್ಶನ, ಧ್ಯಾನ ಮತ್ತು ಪ್ರಾರ್ಥನೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು, ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ವರ್ಗದವರು ಪಾಲ್ಗೊಂಡಿದ್ದರು. ಶಿಕ್ಷಕ ವಿಬಿನ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರೆ, ಶಾಲಾ ವಿದ್ಯಾರ್ಥಿಗಳ ನಾಯಕನಾದ ಕೆಡೆಟ್ ಶಯನ್ ಸೋಮಣ್ಣ ವಂದಿಸಿದರು.







