ಉಗ್ರರ ದಾಳಿ: ಓರ್ವ ಪೊಲೀಸ್ ಹುತಾತ್ಮ
ಶ್ರೀನಗರ, ಜೂ. 21: ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಬುಧವಾರ ನಡೆದ ಉಗ್ರರ ದಾಳಿಯಲ್ಲಿ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ ಹಾಗೂ ಇತರ ಇಬ್ಬರು ಗಾಯಗೊಂಡಿದ್ದಾರೆ. ಜಮ್ಮು ಹಾಗೂ ಕಾಶ್ಮೀರ ರಾಜ್ಯಪಾಲರ ಆಡಳಿತಕ್ಕೆ ಒಳಗಾದ ಮೊದಲ ದಿನವೇ ಭಯೋತ್ಪಾದಕರ ದಾಳಿ ನಡೆದಿದೆ. ಪುಲ್ವಾಮದ ಗಲಂದರ್ ಬೈಪಾಸ್ ಸಮೀಪದ ಕಂಡಿಝಲ್ ಪ್ರದೇಶದಲ್ಲಿ ಪೊಲೀಸ್ ವಾಹನದ ಮೇಲೆ ಉಗ್ರರು ದಾಳಿ ನಡೆಸಿದರು. ಈ ದಾಳಿಯಿಂದ ಮೂವರು ಪೊಲೀಸರು ಗಂಭೀರ ಗಾಯಗೊಂಡರು. ಅವರನ್ನು ಇಲ್ಲಿನ ಬಡಾಮಿಬಾಘ್ ಪ್ರದೇಶದಲ್ಲಿರುವ ಸೇನಾ ನೆಲೆಯ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಇವರಲ್ಲಿ ಓರ್ವ ಪೊಲೀಸ್ ಮೃತಪಟ್ಟರು. ದಾಳಿ ನಡೆದ ಸ್ಥಳದ ಸುತ್ತಮುತ್ತ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪುಲ್ವಾಮದ ಪೊಲೀಸರು ತಿಳಿಸಿದ್ದಾರೆ.
Next Story





