ಎಲ್‌ಎಲ್‌ಎಂ ಕೋರ್ಸ್ ಆರಂಭಕ್ಕೆ ಅನುಮೋದನೆ: ಮಂಗಳೂರು ವಿವಿ ಶೈಕ್ಷಣಿಕ ಮಂಡಳಿ ಸಭೆ

ಉಳ್ಳಾಲ, ಜೂ.21: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಲ್‌ಎಲ್‌ಎಂ ಕೋರ್ಸ್ ಆರಂಭಿಸಲು ಮಂಗಳೂರು ವಿವಿ ಆಡಳಿತ ಕಚೇರಿಯಲ್ಲಿರುವ ಸೆನೆಟ್ ಸಭಾಂಗಣದಲ್ಲಿ ಗುರುವಾರ ನಡೆದ ಶೈಕ್ಷಣಿಕ ಮಂಡಳಿ ಸಭೆ ಅನುಮೋದನೆ ನೀಡಿದೆ.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ಕುಲಪತಿ ಡಾ. ಕಿಶೋರ್ ಕುಮಾರ್ ಸಿ.ಕೆ. ಈ ಕೋರ್ಸ್ ಆರಂಭಿಸಲು ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ. ಒಂದು ವರ್ಷದ ಈ ಕೋರ್ಸ್ ಆರಂಭಿಸಲು ಸರಕಾರ ಒಪ್ಪಿಗೆ ಪಡೆಯಬೇಕಿದೆ. ಅದಲ್ಲದೆ ಸ್ಕೂಲ್ ಆಫ್ ಲಾ ಸ್ಥಾಪನೆಗೆ ಬಾರ್ ಕೌನ್ಸಿಲ್ನ ಅನುಮತಿ ಪಡೆದು ಮುಂದಿನ ವರ್ಷ ಆರಂಭಿಸಲಾಗುವುದು. ಖಾಸಗಿ ಕಾಲೇಜುಗಳಲ್ಲಿ ಈ ಕೋರ್ಸ್‌ಗಳಿವೆ. ಅದಕ್ಕೆ ಪೂರಕವಾಗಿ ವಿವಿಗಳಲ್ಲೂ ಆರಂಭಿಸಲಾಗುತ್ತದೆ. ಈ ಕೋರ್ಸ್‌ಗೆ 17 ಬೋಧನಾ ಹಾಗೂ 17 ಬೋಧಕೇತರ ಸಿಬ್ಬಂದಿಯ ನೇಮಕ ಮಾಡಬೇಕಾಗಿದೆ. ಇದಕ್ಕಾಗಿ ವಾರ್ಷಿಕ 2.30 ಕೋ.ರೂ. ಹೆಚ್ಚುವರಿ ಹಣ ಬೇಕಾಗಿದ್ದು ವಿವಿಗೆ ಮಂಜೂರಾಗುವ ಅನುದಾನದಿಂದ ಭರಿಸಲು ತೀರ್ಮಾನಿಸಲಾಗಿದೆ ಎಂದರು.
ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್:
ವಿಶ್ವ ಪರಿಸರ ದಿನದ ಪ್ರಯುಕ್ತ ವಿವಿ ಕ್ಯಾಂಪಸ್‌ಗಳಲ್ಲಿ ಹಸಿರು ಪರಿಸರ ನಿರ್ಮಾಣ ಹಾಗೂ ಪ್ಲಾಸ್ಟಿಕ್ ಮುಕ್ತಗೊಳಿಸಲು ಕಾರ್ಯಕ್ರಮ ರೂಪಿಸುವಂತೆ ಯುಜಿಸಿಯಿಂದ ಸೂಚನೆ ಬಂದಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿವಿ ಅಧೀನದಲ್ಲಿರುವ ಎಲ್ಲ ಕಾಲೇಜುಗಳು ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ನಿರ್ಮಿಸಲು ವಿವಿ ಜೊತೆ ಸಹಕಾರ ನೀಡಬೇಕು. ಘನತ್ಯಾಜ್ಯ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕುಲಸಚಿವ ಪ್ರೊ.ನಾಗೇಂದ್ರ ಪ್ರಕಾಶ್ ತಿಳಿಸಿದರು.
ತುಳು ಪದವಿ ಗೊಂದಲ:
ಮಂಗಳೂರು ವಿವಿಯಲ್ಲಿ ಪದವಿ ಮಟ್ಟದಲ್ಲಿ ತುಳು ಭಾಷೆಯನ್ನು ಐಚ್ಛಿಕ ವಿಷಯವಾಗಿ ಆರಂಭಿಸಲು ತುಳು ಸಾಹಿತ್ಯ ಅಕಾಡಮಿ ಮಾಡಿದ ಮನವಿ ಮೇರೆಗೆ ಡಾ. ನಾಗಪ್ಪಗೌಡ ನೇತೃತ್ವದ ಸಮಿತಿಯ ಶಿಫಾರಸ್ಸಿಗೆ ಸಿಂಡಿಕೇಟ್ ಸಭೆ ಅನುಮೋದನೆ ನೀಡಿದ್ದರೂ ಕೂಡಾ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ತುಳು ಕಲಿಕೆಯಿಂದ ಉದ್ಯೋಗ ಪಡೆಯುವುದು ಅಷ್ಟು ಸುಲಭವಲ್ಲ. ಪದವಿ ಮಟ್ಟದಲ್ಲಿ ಈ ಭಾಷೆಯ ಕೋರ್ಸ್ ಆರಂಭಿಸುವುದಾದರೆ ಕನ್ನಡ ಅಥವಾ ಆಂಗ್ಲ ಭಾಷೆ ಬಳಕೆ ಮಾಡಲಾಗುತ್ತದೆಯೇ? ಬೋಧಕರಿಗೆ ಇರಬೇಕಾದ ಅರ್ಹತೆ ಏನು? ಡಿಪ್ಲೊಮಾ ಮಾಡಿದವರಿಗೂ ಅವಕಾಶ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟನೆ ಬೇಕು ಎಂದು ವಿವಿ ಆಂಗ್ಲ ವಿಭಾಗದ ಡೀನ್ ಪ್ರೊ. ಕಿಶೋರಿ ಪ್ರಶ್ನಿಸಿದರು.
ತುಳು ಭಾಷಾ ಕಲಿಕೆಯ ಬಗ್ಗೆ ಬೇಡಿಕೆ ಇದೆ. ಪಿಯುಸಿಯಲ್ಲೂ ಭಾಷಾ ವಿಷಯವಾಗಿ ಕಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪದವಿ ಮಟ್ಟದಲ್ಲಿ ಭಾಷಾ ವಿಷಯವಾಗಿ ಬಳಸಬಹುದು. ಈ ವರ್ಷದಿಂದ ವಿವಿ ಸಂಧ್ಯಾ ಕಾಲೇಜುಗಳಲ್ಲಿ ತುಳು ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲು ವಿವಿಗೆ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಡಾ.ನಾಗಪ್ಪ ಗೌಡ ತಿಳಿಸಿದರು.
ಸಭೆಯಲ್ಲಿ ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ದಯಾನಂದ ನಾಯಕ್ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ಉಪಸ್ಥಿತರಿದ್ದರು.
ಅನುಮೋದನೆಗೊಂಡ ಇತರ ವಿಷಯಗಳು
ಮಂಗಳೂರು ವಿವಿಯಲ್ಲಿ ಎಂಎಸ್ಸಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಡಾ.ಆರ್.ಶಂಕರ್ ನಗದು ಬಹುಮಾನ ನೀಡುವ ದತ್ತಿ ನಿಧಿ ಸ್ಥಾಪನೆ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಕಾಂ ಕೋರ್ಸ್ ಎರಡು ಹೆಚ್ಚುವರಿ ವಿಭಾಗ ಸ್ವಾಯತ್ತ ಸ್ಥಾನಮಾನದೊಂದಿಗೆ ಆರಂಭ. ವಿವಿಯಲ್ಲಿ ಶೈಕ್ಷಣಿಕ ಮಂಡಳಿ ಸಮಿತಿ ರಚನೆ. ಮಂಗಳೂರು ವಿವಿಯಲ್ಲಿ ಎಂಸಿಜೆ ಬೆಳ್ಳಿ ಹಬ್ಬ ವರ್ಷದ ನಗದು ಬಹುಮಾನ ದತ್ತಿ ನಿಧಿ ಸ್ಥಾಪನೆ.
ತುಳು ಪದವಿ ವಿನಿಮಯ ಮತ್ತು ಪಠ್ಯಕ್ರಮ. ಮಹೇಶ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಹೆಸರು ಬದಲಾವಣೆ.ಶ್ರೀದೇವಿ ಕಾಲೇಜಿಗೆ ವಿಸ್ತರಣಾ ಸಂಯೋಜನೆ. ಶಾರದಾ ಕಾಲೇಜ್ ಕೊಡಿಯಾಲ್ ಬೈಲ್ನಿಂದ ತಲಪಾಡಿ ದೇವಿನಗರಕ್ಕೆ ಸ್ಥಳಾಂತರ. ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಹೊಸ ಕೋರ್ಸುಗಳಿಗೆ ಸ್ವಾಯತ್ತ ಸ್ಥಾನಮಾನ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹೊಸ ಕೋರ್ಸುಗಳಿಗೆ ಸ್ವಾಯತ್ತ ಸ್ಥಾನಮಾನ.
ಸುಳ್ಯ ಶ್ರೀ ಶಾರದಾ ಮಹಿಳಾ ಕಾಲೇಜಿನಲ್ಲಿ ಬಿ.ಎ.ಪದವಿ ವಿಸ್ತರಣಾ ಸಂಯೋಜನೆ. ಕೋಟೇಶ್ವರ ಇಸಿಆರ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಮುಂದುವರಿಕಾ ಸಂಯೋಜನೆ ಮಂಜೂರಾತಿ. ಮಂಗಳೂರು ವಿವಿಯಲ್ಲಿ ನೇರ ಶಿಕ್ಷಣದಡಿ ಆರಂಭಗೊಳ್ಳಲಿರುವ ತುಳು ಸರ್ಟಿಫಿಕೆಟ್, ಡಿಪ್ಲೊಮಾ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮಗಳ ವಿನಿಮಯ ಇತ್ಯಾದಿ.







