ಉಡುಪಿಯಲ್ಲಿ ಯೋಗ ಗ್ರಾಮಗಳು ರೂಪುಗೊಳ್ಳಲಿ: ದಿನಕರ ಬಾಬು

ಉಡುಪಿ, ಜೂ.21: ಜಿಲ್ಲೆಯ ಪ್ರತಿ ಮನೆ ಮನೆಯಲ್ಲಿ ಯೋಗ ಅಭ್ಯಾಸ ನಡೆಯುವಂತಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಯೋಗಕ್ಕೆ ಹೆಚ್ಚು ಆದ್ಯತೆ ನೀಡಿ, ಕುಟುಂಬದ ಇಬ್ಬರು ಅಥವಾ ಮೂವರು ಯೋಗಾಭ್ಯಾಸ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಗ್ರಾಮಗಳು ಯೋಗ ಗ್ರಾಮಗಳಾಗಿ ರೂಪುಗೊಳ್ಳಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಗುರುವಾರ ಮುಂಜಾನೆ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಡಾ.ಜಿ.ಶಂಕರ್ ಮಹಿಳಾ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇವರ ಸಂಯುಕ್ತ ಸಹಭಾಗಿತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಗಾಭ್ಯಾಸವನ್ನು ಕೇವಲ ಒಂದು ದಿನ ಮಾಡಿದರೆ ಸಾಲದು. ನಿರಂತರ ಅಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮ ಪಡಿಸಿಕೊಳ್ಳಲು ಸಾಧ್ಯ. ಕೇರಳದ ಗ್ರಾಮವೊಂದರ ಪ್ರತಿ ಮನೆಗಳಲ್ಲಿ ಕುಟುಂಬದ ಸದಸ್ಯರು ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವ ಮೂಲಕ ಇಡೀ ಗ್ರಾಮ ಯೋಗ ಗ್ರಾಮ ಎಂಬ ಕೀರ್ತಿ ಪಡೆದಿದೆ. ಆದೇ ರೀತಿ ಉಡುಪಿ ಜಿಲ್ಲೆಯಲ್ಲೂ ಯೋಗಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ, ಇಲ್ಲೂ ಯೋಗ ಗ್ರಾಮಗಳು ರೂಪು ಗೊಳ್ಳಬೇಕು ಎಂದವರು ನುಡಿದರು.
ಕಾರ್ಯಕ್ರಮವನ್ನು ಉಡುಪಿ ತಾಪಂ ಅದ್ಯಕ್ಷೆ ನಳಿನಿ ಪ್ರದೀಪ್ ರಾವ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ 20 ಬಗೆಯ ಯೋಗ ಆಸನಗಳ ಅಭ್ಯಾಸ ನಡೆಸಲಾಯಿತು. ಮುನಿಯಾಲು ಆರ್ಯುವೇದ ಕಾಲೇಜಿನ ಪ್ರಾಧ್ಯಾಪಕಿ ಜ್ಯೋತ್ನ್ಸಾ ಯೋಗ ಪ್ರಾತ್ಯಕ್ಷಿಕೆ ವಿವರಿಸಿದರು. ವಿವೇಕಾನಂದ ಪೈ ಧ್ಯಾನ ಅಭ್ಯಾಸ ಕುರಿತು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರ್ರಾನ್ಸಿಸ್, ಜಿಪಂ ಸಿಇಓ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ, ಪೌರಾಯುಕ್ತ ಜನಾರ್ದನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಜಿ.ಶಂಕರ್ ಮಹಿಳಾ ಪ್ರ.ದ.ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್, ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ್ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ ನಿರಾಲಂಬ ಪೂರ್ಣ ಚಕ್ರಾಸನದಲ್ಲಿ ಗಿನ್ನಿಸ್ ದಾಖಲೆ ಮಾಡಿರುವ ತನುಶ್ರೀ ಪಿತ್ರೋಡಿ ಇವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ. ಅಲಕಾನಂದ ರಾವ್ ಸ್ವಾಗತಿಸಿದರು. ವೀಣಾ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.







