ಕ್ರಿಕೆಟಿಗರಿಗೆ ಪರಿಷ್ಕೃತ ವೇತನ: ಸಿಒಎ ಅನುಮೋದನೆ ನಿರೀಕ್ಷೆಯಲ್ಲಿ ಬಿಸಿಸಿಐ

ಹೊಸದಿಲ್ಲಿ, ಜೂ.21: ಭಾರತದ ಪ್ರಮುಖ ಕ್ರಿಕೆಟಿಗರ ವೇತನವನ್ನು ಮಾರ್ಚ್ 5ರಂದು ಪರಿಷ್ಕರಿಸಲಾಗಿದ್ದರೂ ಆಟಗಾರರಿಗೆ ಇನ್ನೂ ವೇತನ ದೊರಕಿಲ್ಲ. ಜೂನ್ 22ರಂದು ನಡೆಯಲಿರುವ ಬಿಸಿಸಿಐ ಮಹಾಸಭೆಯಲ್ಲಿ ಪರಿಷ್ಕೃತ ವೇತನಕ್ಕೆ ಅನುಮೋದನೆ ದೊರಕುವ ನಿರೀಕ್ಷೆಯಿದೆ. ಸುಮಾರು 3 ತಿಂಗಳಾವಧಿಯ ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ಕ್ರಿಕೆಟ್ ತಂಡ ಜೂನ್ 23ರಂದು ಭಾರತದಿಂದ ಪ್ರಯಾಣಿಸಲಿದೆ. ಇದಕ್ಕೆ ಮೊದಲು ಆಟಗಾರರ ವೇತನಕ್ಕೆ ಅನುಮೋದನೆ ಪಡೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌಧರಿ ತಿಳಿಸಿದ್ದಾರೆ.
ಆಟಗಾರರ ಒಪ್ಪಂದದ ಕುರಿತ ಪತ್ರ ತನ್ನಲ್ಲಿದೆ. ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಪರಿಷ್ಕೃತ ವೇತನಕ್ಕೆ ಅನುಮೋದನೆ ದೊರೆತರೆ ಅದಕ್ಕೆ ಸಹಿ ಹಾಕುತ್ತೇನೆ. ಸಹಿ ಬೀಳದಿದ್ದರೆ ಏನೂ ಮಾಡುವಂತಿಲ್ಲ. ನನ್ನ ಕೈಗಳನ್ನು ಕಟ್ಟಿಹಾಕಲಾಗಿದೆ. ನೀತಿ ನಿರ್ಧಾರಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳು ಮಹಾಸಭೆಯ ಅನುಮೋದನೆ ಪಡೆಯಬೇಕಿದೆ ಎಂದು ಚೌಧರಿ ತಿಳಿಸಿದ್ದಾರೆ.
ಈ ಮಧ್ಯೆ, ಮಹಾಸಭೆ ನಡೆಸಲು ತಾನು ಅನುಮೋದನೆ ನೀಡಿಲ್ಲ ಎಂದು ಸುಪ್ರೀಂಕೋರ್ಟ್ ನೇಮಿಸಿರುವ ಸಿಒಎ (ಆಡಳಿತಗಾರರ ಸಮಿತಿ) ಸ್ಪಷ್ಟಪಡಿಸಿದೆ. ಅಲ್ಲದೆ ಸಂಭಾವನೆ ಪಡೆಯುವ ಸಮಿತಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಬಾರದೆಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ರಾಹುಲ್ ಜೋಹ್ರಿ ಶುಕ್ರವಾರದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಲಾಗಿದೆ. ಮಹಾಸಭೆಗೆ ತಡೆ ನೀಡುವ ಅಧಿಕಾರ ಸಿಒಎಗೆ ಇಲ್ಲವಾದರೂ, ಕ್ರಿಕೆಟ್ ತಂಡ, ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ವಿಮಾನಯಾನ ವೆಚ್ಚ, ಟಿಎ/ಡಿಎ ಮತ್ತಿತರ ಬಿಲ್‌ಗಳ ಪಾವತಿ ಮಾಡದಂತೆ ಸೂಚನೆ ನೀಡಿದೆ. ಬಿಸಿಸಿಐ-ಸಿಒಎ ನಡುವಿನ ಸಂಬಂಧ ಹಳಸಿ ಹೋಗಿದ್ದು, ಆಟಗಾರರ ಪರಿಷ್ಕೃತ ವೇತನದ ಕುರಿತು ತಮಗೆ ಮಾಹಿತಿ ನೀಡಲಾಗಿಲ್ಲ ಎಂದು ಸಿಒಎ ಸದಸ್ಯರು ಹೇಳುತ್ತಿದ್ದಾರೆ. ಪರಿಷ್ಕೃತ ವೇತನ ವ್ಯವಸ್ಥೆಯ ಪ್ರಕಾರ ಎ+ ವಿಭಾಗದ ಆಟಗಾರರು 7 ಕೋಟಿ ರೂ, ಎ ವಿಭಾಗದ ಆಟಗಾರರು 5 ಕೋಟಿ ರೂ, ಬಿ ಮತ್ತು ಸಿ ಗುಂಪಿನ ಆಟಗಾರರು ಕ್ರಮವಾಗಿ 3 ಕೋಟಿ ರೂ. ಹಾಗೂ 1 ಕೋಟಿ ರೂ. ವೇತನ ಪಡೆಯುತ್ತಾರೆ. ತಿಂಗಳ ಸಂಬಳದಲ್ಲಿ ಪಂದ್ಯ ಶುಲ್ಕ ಹಾಗೂ ಆಟಗಾರರ ದಿನಭತ್ಯೆಯನ್ನು ಸೇರಿಸಲಾಗಿಲ್ಲ. ಸಿಒಎ ಜತೆ ವಿವರವಾದ ಮಾತುಕತೆ ನಡೆಸಿದ ಬಳಿಕ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎನ್ನಲಾಗಿದೆ.
ಇದರಂತೆ 27 ಆಟಗಾರರ ಹೊಸ ವೇತನ ಸ್ವರೂಪವನ್ನು ಸಿಒಎ ಮಾರ್ಚ್ 7ರಂದು ಬಿಡುಗಡೆಗೊಳಿಸಿದೆ. ಆದರೆ ಬಿಸಿಸಿಐಯ ನಿಯಮದಂತೆ, ಆಟಗಾರರ ವೇತನದ ಕುರಿತ ಒಪ್ಪಂದಕ್ಕೆ ಸಹಿ ಹಾಕುವ ಅಧಿಕಾರ ಕಾರ್ಯದರ್ಶಿಗೆ ಇರುತ್ತದೆ. ಇದರಂತೆ ಒಪ್ಪಂದ ಕಾರ್ಯಗತವಾಗಬೇಕಿದ್ದಲ್ಲಿ ಅಮಿತಾಬ್ ಚೌಧರಿಯ ಸಹಿ ಅಗತ್ಯವಾಗಿದೆ. ಶುಕ್ರವಾರ ನಡೆಯಲಿರುವ ಸಭೆಯಲ್ಲಿ 2021ರಲ್ಲಿ ಭಾರತದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಹೆಚ್ಚುವರಿ ಆದಾಯ ಪಡೆಯುವ ಉದ್ದೇಶದಿಂದ ಐಸಿಸಿ ವಿಶ್ವ ಟಿ-20 ಟೂರ್ನಿಯನ್ನಾಗಿ ಬದಲಾಯಿಸಿರುವ ಕುರಿತೂ ಚರ್ಚೆ ನಡೆಯಲಿದೆ. ಅಲ್ಲದೆ ದ್ವಿಪಕ್ಷೀಯ ಸರಣಿಯ ಒಪ್ಪಂದವನ್ನು ಉಲ್ಲಂಘಿಸಿದ ಕಾರಣ ಭಾರತೀಯ ಕ್ರಿಕೆಟ್ ಮಂಡಳಿ 70 ಮಿಲಿಯನ್ ಡಾಲರ್ ಪರಿಹಾರ ಮೊತ್ತ ಪಾವತಿಸಬೇಕು ಎಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಗ್ರಹದ ಕುರಿತೂ ಚರ್ಚೆ ನಡೆಯಲಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪರಿಹಾರ ಮೊತ್ತ ನೀಡುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.







