ಪಾಣೆಮಂಗಳೂರು: ಎಟಿಎಂ ಯಂತ್ರದಿಂದ ನಗದು ಕಳವಿಗೆ ಯತ್ನ

ಬಂಟ್ವಾಳ, ಜೂ. 21: ಬ್ಯಾಂಕ್‌ವೊಂದರ ಎಟಿಎಂ ಯಂತ್ರವನ್ನು ಜಖಂಗೊಳಿಸಿ, ನಗದು ಕಳವಿಗೆ ಯತ್ನಿಸಿದ ಘಟನೆ ಪಾಣೆಮಂಗಳೂರುನಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಸಿಂಡಿಕೇಟ್ ಬ್ಯಾಂಕ್‌ನ ಪಾಣೆಮಂಗಳೂರು ಶಾಖೆಗೊಳಪಟ್ಟ ಎಟಿಎಂ ಯಂತ್ರದಲ್ಲಿರುವ ನಗದು ಕಳವಿಗೆ ವಿಫಲ ಯತ್ನ ನಡೆದಿದೆ.
ಘಟನೆ: ಗುರುವಾರ ಬೆಳಗ್ಗಿನ ಜಾವ 4 ಗಂಟೆಗೆ ಎಟಿಎಂನಲ್ಲಿ ಸೈರನ್ ಮೊಳಗುತ್ತಿರುವ ಬಗ್ಗೆ ಮಾಹಿತಿ ಪಡೆದ ಬ್ಯಾಂಕ್‌ನ ಶಾಖಾ ಪ್ರಬಂಧಕ ಎನ್. ಸುಬ್ಬರಾವ್ ಸ್ಥಳಕ್ಕಾಗಮಿಸಿದಾಗ ಎಟಿಎಂನ ರೂಮಿನ ಬಾಗಿಲು ತೆರೆದಿದ್ದು, ಬಳಿಕ ಪರಿಶೀಲಿಸಿದಾಗ ಎಟಿಎಂನ ಮೊನಿಟರ್ ಹಾಗೂ ಇತರ ಭಾಗಗಳು ಜಖಂ ಆಗಿದ್ದವು ಎಂದು ದೂರಲಾಗಿದೆ.
ಬಳಿಕ ಎಟಿಎಂನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಎಟಿಎಂ ಯಂತ್ರವನ್ನು ಆಯುಧದಿಂದ ಜಖಂಗೊಳಿಸುವ ದೃಶ್ಯ ದಾಖಲಾಗಿದೆ. ಘಟನೆಯ ಬಗ್ಗೆ ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್ಸೈ ಹರೀಶ್ ಮತ್ತವರ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಿಂದ ಎಟಿಎಂನ ಮೊನಿಟರ್ ಹಾಗೂ ಇತರ ಭಾಗಗಳು ಜಖಂಗೊಂಡಿದ್ದು, ಎಟಿಎಂನಿಂದ ನಗದು ಅಥವಾ ಇತರ ಯಾವುದೇ ಸೊತ್ತುಗಳು ಕಳವಾಗಿರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







