ಕಾರು ಢಿಕ್ಕಿ: ಪಾದಚಾರಿಗೆ ಗಂಭೀರ ಗಾಯ
ಮಂಗಳೂರು, ಜೂ.21: ನಗರದ ಸಿಟಿ ಸೆಂಟರ್ ಕಡೆಯಿಂದ ಕೆ.ಎಸ್.ಆರ್ ಕಡೆಗೆ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಮಹಿಳೆಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.
ಜೆಪ್ಪಿನಮೊಗರು ನಿವಾಸಿ ಗುಲಾಬಿ ಶೆಟ್ಟಿ ಗಾಯಗೊಂಡವರು. ಗಾಯಾಳು ಗುಲಾಬಿ ಶೆಟ್ಟಿ ನಗರದ ಸಿಟಿ ಸೆಂಟರ್ ಕಡೆಯಿಂದ ಕೆ.ಎಸ್.ಆರ್ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರ್ಪೊರೇಶನ್ ಎಟಿಎಂ ಬಳಿ ತನ್ನ ಪರಿಚಯಸ್ಥೆಗೆ ಎದುರಾಗಿ, ಮಾತುಕತೆ ನಡೆಸಿದ್ದರು. ಈ ವೇಳೆ ಬಿಷಪ್ ಹೌಸ್ ಕಡೆಯಿಂದ ಹಂಪನಕಟ್ಟೆ ಕಡೆಗೆ ನಿರ್ಲಕ್ಷ್ಯದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಕಾರು ಚಾಲಕ ಗುಲಾಬಿ ಶೆಟ್ಟಿ ಅವರಿಗೆ ಢಿಕ್ಕಿ ಹೊಡೆಸಿದ್ದಾನೆ. ಪರಿಣಾಮ ಪಾದಚಾರಿ ಮಹಿಳೆ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗಳಾಗಿವೆ.
ಬಳಿಕ ಗಾಯಾಳು ಕೆಎಂಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು. ಮನೆಯಲ್ಲಿ ಗಾಯದ ನೋವು ಉಲ್ಬಣಿಸಿದ್ದರಿಂದ ಗುರುವಾರ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಗಾಯಾಳನ್ನು ದಾಖಲಿಸಲಾಗಿದೆ.
ಕಾರು ಚಾಲಕನು ಅಪಘಾತ ನಡೆದ ಬಳಿಕ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಕಾರಿನೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





