ತೊರೆಗೆ ಬೀಳಲಿದ್ದ ಗೆಳೆಯನನ್ನು ರಕ್ಷಿಸಿದ 5ನೇ ತರಗತಿ ವಿದ್ಯಾರ್ಥಿ
ಬೆಳ್ತಂಗಡಿಯ ಫಂಡಿಜೆಯಲ್ಲಿ ನಡೆದ ಘಟನೆ

ಸುಜಯ - ಆದಿತ್ಯ
ಬೆಳ್ತಂಗಡಿ, ಜೂ.21: ಕಾಲು ಸಂಕ ದಾಟುವಾಗ ತುಂಬಿ ಹರಿಯುತ್ತಿದ್ದ ತೊರೆಯೊಂದಕ್ಕೆ ಬೀಳುತ್ತಿದ್ದ ತನ್ನ ಗೆಳೆಯನನ್ನು ಸಮಯ ಪ್ರಜ್ಞೆಯಿಂದ ರಕ್ಷಿಸಿದ ಘಟನೆ ನಿಟ್ಟಡೆ ಗ್ರಾಮದ ಫಂಡಿಜೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಘಟನೆಯ ವಿವರ:
ಫಂಡಿಜೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಆದಿತ್ಯ ಹಾಗೂ ಆತನ ಗೆಳಯ ಅದೇ ಶಾಲೆಯ 5ನೇ ತರಗತಿಯ ಸುಜಯ ಸಂಜೆ ಶಾಲೆಯಿಂದ ಮನೆಗೆ ಮರುಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ಫಂಡಿಜೆ ಗ್ರಾಮದ ದಂಬೆ ಎಂಬಲ್ಲಿನ ತೊರೆಯೊಂದರ ಮೇಲಿನ ಅಡಿಕೆ ಮರದಿಂದ ಮಾಡಿದ ಕಾಲು ಸಂಕ ದಾಟುತ್ತಿದ್ದ ಸಂದರ್ಭ ಸುಜಯನ ಹಿಂದಿನಿಂದ ಬರುತ್ತಿದ್ದ ಆದಿತ್ಯ ಅಕಾಸ್ಮಾತ್ ಕಾಲು ಜಾರಿ ಬೀಳತೊಡಗಿದ. ತಕ್ಷಣ ಇದನ್ನು ಗಮನಿಸಿದ ಸುಜಯ ಆತನನ್ನು ರಕ್ಷಿಸಲು ಯತ್ನಿಸಿದ್ದಾನೆ. ಆದಿತ್ಯನ ಒಂದು ಕಾಲನ್ನು ಸುಜಯ ಹಿಡಿದುಕೊಂಡ. ಈ ಹಂತದಲ್ಲಿ ಆದಿತ್ಯನ ಇಡೀ ಶರೀರ ಸಂಕದ ಕೆಳಗೆ ನೇತಾಡತೊಡಗಿತ್ತು. ಕಾಲಿನ ಮಣಿಗಂಟು ಸುಜಯನ ಕೈಯಲ್ಲಿತ್ತು. ಚೀಲ, ಕೊಡೆಯೊಂದಿಗಿದ್ದ ಆದಿತ್ಯನನ್ನು ಮೇಲೆತ್ತೆಲು ಸುಜಯನಿಗೆ ಶಕ್ತಿ ಸಾಕಾಗದೆ ಬೊಬ್ಬೆ ಹೊಡೆಯತೊಡಗಿದ. ಆದಿತ್ಯನೂ ಕೂಗತೊಡಗಿದ. ಬೊಬ್ಬೆ ಕೇಳಿ ಕೂಡಲೇ ಅನತಿದೂರದ ಮನೆಯ ಜಯಾನಂದ ಸಾಠೆ ಹಾಗೂ ಆದಿತ್ಯನ ತಂದೆ ರತ್ನಾಕರ ಹೆಬ್ಬಾರ್ ಹಾಗೂ ಇತರರು ತಕ್ಷಣ ಸ್ಥಳಕ್ಕೆ ಬಂದು ಆದಿತ್ಯನನ್ನು ಮೇಲೆತ್ತಿದ್ದಾರೆ. ಸುಮಾರು ನಾಲ್ಕೈದು ನಿಮಿಷಗಳ ಕಾಲ ಸುಜಯ ಆದಿತ್ಯನನ್ನು ಹಿಡಿದುಕೊಂಡಿದ್ದು ಮಿತ್ರನ ರಕ್ಷಣೆಯನ್ನು ಮಾಡಿದ್ದಾನೆ.
ಸುಜಯನ ಸಮಯ ಪ್ರಜ್ಞೆಯಿಂದಾಗಿ ಆದಿತ್ಯನ ಪ್ರಾಣ ಉಳಿಯುವಂತಾಗಿದೆ. ಕಾಲಿನ ಮಣಿಗಂಟು ಸಿಗದೇ ಇರುತ್ತಿದ್ದಲ್ಲಿ ಆದಿತ್ಯ ಕಲ್ಲು ಬಂಡೆಗಳಿಂದ ಕೂಡಿದ್ದ ತುಂಬಿ ಹರಿಯುತ್ತಿದ್ದ ದಂಬೆ ತೊರೆಯಲ್ಲಿ ನೀರು ಪಾಲಾಗುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುಜಯನ ಸಾಹಸ ಫಂಡಿಜೆ ಗ್ರಾಮದಲ್ಲಿ ಇದೀಗ ಮನೆ ಮಾತಾಗಿದೆ.





