ಮಂಡ್ಯ ನಗರಸಭೆ ಅಧ್ಯಕ್ಷ ಬೋರೇಗೌಡ ನಿಧನ

ಮಂಡ್ಯ, ಜೂ.21: ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ(52) ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೃದಯ ಸಂಬಂಧ ಸಮಸ್ಯೆ ಹೊಂದಿದ್ದ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆ ಸಹ ಮಾಡಿಸಿಕೊಂಡಿದ್ದರು.
ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಪತ್ನಿ ಸೇರಿದಂತೆ ಕುಟುಂಬದವರು ಹೈದರಾಬಾದ್ ಪ್ರವಾಸಕ್ಕೆ ತೆರಳಿದ್ದು, ಸಾವಿನ ಸುದ್ದಿ ತಿಳಿದು ಬಂದ ನಂತರ ಸಂಜೆ ವೇಳೆಗೆ ಅಂತ್ಯಕ್ರಿಯೆ ನೆರವೇರಿತು.
ನಗರದ 17ನೇ ವಾರ್ಡ್ ಹೊಸಹಳ್ಳಿಯಿಂದ ಸತತವಾಗಿ 3 ಬಾರಿ ಕಾಂಗ್ರೆಸ್ ಪಕ್ಷದಿಂದ ನಗರಸಭೆಗೆ ಆಯ್ಕೆಯಾಗಿದ್ದ ಬೋರೇಗೌಡರು, ಮಾಜಿ ಸಚಿವ ಅಂಬರೀಷ್ ಅಪ್ತರಾಗಿದ್ದು ಅವರ ಕೃಪಕಟಾಕ್ಷದಿಂದ ನಗರಸಭೆ ಅಧ್ಯಕ್ಷ ಗಾದಿಗೇರಿದ್ದರು. ನಂತರ ನಡೆದ ರಾಜಕೀಯ ಮೇಲಾಟದಲ್ಲಿ ಅಂಬರೀಶ್ ಸೇರಿದಂತೆ ತನ್ನ ಸ್ವಪಕ್ಷೀಯರ ವಿರೋಧದ ನಡುವೆ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಗೆದ್ದು ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಂಡಿದ್ದರು. ಇನ್ನೂ 3 ತಿಂಗಳು ನಗರಸಭೆಯ ಅವಧಿ ಬಾಕಿ ಉಳಿದಿತ್ತು.
ಗಣ್ಯರ ಸಂತಾಪ:
ಬೋರೇಗೌಡರ ನಿಧನಕ್ಕೆ ಜಿಲ್ಲಾಡಳಿತ ಹಾಗೂ ನಗರಸಭೆ ಸೇರಿದಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಎಂ.ಎಸ್ ಆತ್ಮಾನಂದ, ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ವಕೀಲ ಎಂ.ಗುರುಪ್ರಸಾದ್ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ನಿಧನ ಹೊಂದಿದ ನಗರದ ಪ್ರಥಮ ಪ್ರಜೆಗೆ ಒಂದು ನಿಮಿಷಗಳ ಕಾಲ ಮೌನ ಆಚರಿಸುವ ಮೂಲಕ ಸಂತಾಪ ಸೂಚಿಸಲಾಯಿತು. ಕ್ರೀಡಾಂಗಣದಿಂದ ಆಯುಷ್ ಇಲಾಖೆ ಹಮ್ಮಿಕೊಳ್ಳಲಾಗಿದ್ದ ಯೋಗ ಜಾಥಾವನ್ನು ರದ್ದುಗೊಳಿಸಲಾಯಿತು.







