ರಫ್ತು ಕ್ಷೇತ್ರ ಬೆಂಬಲಿಸಲು 2900 ಕೋಟಿ ರೂ. ಸಾಲ ನೀಡುವ ಗುರಿ: ಕರ್ಣಾಟಕ ಬ್ಯಾಂಕ್ ಮುಖ್ಯಸ್ಥ

ಮಂಗಳೂರು, ಜೂ.21: ಭಾರತದ ರಫ್ತು ಕ್ಷೇತ್ರದಲ್ಲಿ ಹೆಚ್ಚಳವಾಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. 2018-19ರ ವಿತ್ತೀಯ ವರ್ಷದಲ್ಲಿ ಭಾರತದ ರಫ್ತು ಕ್ಷೇತ್ರ ಇನ್ನಷ್ಟು ಬೆಳವಣಿಗೆಯನ್ನು ಕಾಣಬಹುದು ಎಂದು ನಿರೀಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ದೇಶದ ರಫ್ತು ಕ್ಷೇತ್ರವನ್ನು ಬೆಂಬಲಿಸುವ ಉದ್ದೇಶದಿಂದ ಕರ್ಣಾಟಕ ಬ್ಯಾಂಕ್ ಪ್ರಸಕ್ತ ವರ್ಷದಲ್ಲಿ 2900 ಕೋಟಿ ರೂ. ಸಾಲವನ್ನು ರಫ್ತು ಕ್ಷೇತ್ರಕ್ಕೆ ನೀಡುವ ಗುರಿಯನ್ನು ಹೊಂದಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ. ತಿಳಿಸಿದ್ದಾರೆ.
ಜೂನ್ 21ರಂದು ಬ್ಯಾಂಕ್‌ನ ಮುಖ್ಯ ಕಚೇರಿಯಲ್ಲಿ ನಡೆದ ಫೋರೆಕ್ಸ್ ಬ್ಯುಸಿನೆಸ್ ಕಾನ್ಫರೆನ್ಸ್‌ನಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸಂದರ್ಭದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ದೇಶದ ರಫ್ತುದಾರರು ಮತ್ತು ಆಮದುದಾರರನ್ನು ಹೆಚ್ಚೆಚ್ಚು ಸಂಪರ್ಕಿಸುವಂತೆ ಬ್ಯಾಂಕ್‌ನ ಮುಖ್ಯ ಕಾರ್ಯಚರಣಾ ಅಧಿಕಾರಿ ರಾಘವೇಂದ್ರ ಭಟ್ ಬ್ಯಾಂಕ್‌ನ ಎಲ್ಲ ಫಾರೆಕ್ಸ್ ಆಧಾರಿತ ಶಾಖೆಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯ ವೇಳೆ ಪ್ರಧಾನ ವ್ಯವಸ್ಥಾಪಕ ಸುಭಾಶ್ಚಂದ್ರ ಪುರಾಣಿಕ್, ವೈ.ವಿ ಬಾಲಚಂದ್ರ, ನಾಗರಾಜ ರಾವ್ ಬಿ., ಗೋಕುಲ್‌ದಾಸ್ ಪೈ, ಮಂಜುನಾಥ ಭಟ್ ಬಿ.ಕೆ ಹಾಗೂ ಮಹಾಲಿಂಗೇಶ್ವರ ಕೆ ಉಪಸ್ಥಿತರಿದ್ದರು. ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ವಾದಿರಾಜ್ ಕೆ.ಎ ಅತಿಥಿಗಳನ್ನು ಸ್ವಾಗತಿಸಿದರು.
ಫೋರೆಕ್ಸ್ ಸಪೋರ್ಟ್ ಗ್ರೂಪ್‌ನ ಜೇನ್ ಮರಿಯ ನಳಿನಿ ಸಲ್ದಾನಾ ಬ್ಯಾಂಕ್‌ನ ಫೋರೆಕ್ಸ್ ವ್ಯವಹಾರದ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಧನ್ಯವಾದ ಸಮರ್ಪಿಸಿದರು.







