ಕೋಮು ಪ್ರಚೋದನೆ ತಡೆಗಟ್ಟಿ: ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು, ಜೂ.22: ಕೋಮುಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಪ್ರಕರಣಗಳನ್ನು ತಡೆಗಟ್ಟಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಇಂದಿಲ್ಲಿ ಪೊಲೀಸರಿಗೆ ಸೂಚಿಸಿದರು.
ಶುಕ್ರವಾರ ನಗರ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಮು ಗಲಭೆ ಎಬ್ಬಿಸುವವರು ಯಾವುದೇ ಜಾತಿ, ಧರ್ಮ, ಸಮುದಾಯಕ್ಕೆ ಸೇರಿದ್ದರೂ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕವಾಗಿ ಪ್ರಚೋದನಾತ್ಮಕ ಹೇಳಿಕೆ ನೀಡಿದರೆ, ಅಂಥವರ ಮೇಲೆ ಕಣ್ಣಿಡಲಾಗುತ್ತದೆ. ಈ ಪ್ರವೃತ್ತಿ ಹೆಚ್ಚಿದರೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಅಪರಾಧ ಕಡಿಮೆ: ಕರ್ನಾಟಕವೂ ಅಪರಾಧ ಸಂಖ್ಯೆಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ. ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಪೊಲೀಸರೆಂದರೆ ಜನರಲ್ಲಿ ಭಯ, ಆತಂಕವಿದೆ. ಈ ಮನೋಭಾವ ಅಳಿಸಿ, ಜನಸ್ನೇಹಿ ಪೊಲೀಸರಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದೇವೆ. ಇನ್ನು, ನೇಮಕಾತಿ ವಿಚಾರದಲ್ಲಿ ಕಳೆದ 5 ವರ್ಷದಲ್ಲಿ 30 ಸಾವಿರ ಪೇದೆಗಳ ಹಾಗೂ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಆಗಿದೆ. ಇನ್ನೂ 14 ಸಾವಿರ ಪೇದೆಗಳ ಹುದ್ದೆ ಖಾಲಿ ಇದ್ದು, ಹಂತ ಹಂತವಾಗಿ ತುಂಬಲಾಗುತ್ತದೆ. ಅಲ್ಲದೆ, ನಿವೃತ್ತಿ ಹೊಂದುವ ಸ್ಥಾನಗಳಿಗೆ ಆಗಾಗ್ಗೆ ನೇಮಕಾತಿ ನಡೆಯಲಿದೆ ಎಂದು ತಿಳಿಸಿದರು.
‘ಕರ್ನಾಟಕ ದೇಶಕ್ಕೆ ಮಾದರಿ’
ಪೊಲೀಸ್ ಪೇದೆಗಳು ಸಬ್‌ಬೀಟ್‌ನಲ್ಲಿ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಅಲ್ಲಿನ ಆಗು ಹೋಗುಗಳನ್ನು ತಿಳಿದುಕೊಳ್ಳುತ್ತಿದ್ದರು. ಇದರಿಂದ ಅಪರಾಧ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿರುವುದರಿಂದ ಎಲ್ಲ ರಾಜ್ಯಗಳು ಅನುಸರಿಸುವಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ಕೀರ್ತಿ ಮತ್ತಷ್ಟು ಹೆಚ್ಚಿದೆ
-ಜಿ.ಪರಮೇಶ್ವರ್, ಗೃಹ ಸಚಿವ







