ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮುತಾಲಿಕ್ ಬಂಧನಕ್ಕೆ ಬಸವರಾಜ ಸೂಳಿಭಾವಿ ಆಗ್ರಹ
"ಕೇಸರಿ ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ಕೈಗೊಳ್ಳಿ"

ಬೆಂಗಳೂರು/ಗದಗ, ಜೂ. 22: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದು, ದೇಶದಲ್ಲಿ ಕೇಸರಿ ಭಯೋತ್ಪಾದನೆ ನಡೆಯುತ್ತಿರುವುದು ಸ್ಪಷ್ಟ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೇಸರಿ ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕೆಂದು ಗೌರಿ ಲಂಕೇಶ್, ಪನ್ಸಾರೆ, ದಾಭೋಲ್ಕರ್, ಡಾ.ಕಲ್ಬುರ್ಗಿ ವಿಚಾರವಾದಿಗಳ ಹತ್ಯಾ ವಿರೋಧಿ ಸಮಿತಿ ಮುಖಂಡ ಬಸವರಾಜ ಸೂಳಿಭಾವಿ ಒತ್ತಾಯಿಸಿದ್ದಾರೆ.
ಶುಕ್ರವಾರ ಗದಗದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಹತ್ಯೆ ಸಂಬಂಧ ಈಗಾಗಲೇ ‘ಸಿಟ್’ ತಂಡ ಶ್ರೀರಾಮಸೇನೆಯ ಪರಶುರಾಮ್ ವಾಗ್ಮೋರೆ ಸೇರಿ ಇನ್ನಿತರರನ್ನು ಬಂಧಿಸಿ, ತನಿಖೆ ಕೈಗೊಂಡಿದೆ. ಆದರೆ, 'ಈ ಹತ್ಯೆ ಪ್ರಕರಣಕ್ಕೂ ಶ್ರೀರಾಮಸೇನೆಗೂ ಸಂಬಂಧವಿಲ್ಲ. ಬಂಧಿತರು ಆರೆಸೆಸ್ಸ್‌ನವರು' ಎಂದು ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಶ್ರೀರಾಮಸೇನೆ ವಿಜಯಪುರ ಜಿಲ್ಲಾಧ್ಯಕ್ಷ ರಾಕೇಶ್ ಮಠ್, ವಾಗ್ಮೋರೆ ಕುಟುಂಬಕ್ಕೆ ಆರ್ಥಿಕ ನೆರವು ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದು, ಹಣ ಸಂಗ್ರಹಿಸುತ್ತಿದ್ದಾರೆ. ಬಿಜೆಪಿ ನಾಯಕಿ ಮಂಚಾಲೇಶ್ವರಿ ಜಾಲತಾಣಗಳಲ್ಲಿ ಪ್ರತಿ ಮನೆಯಲ್ಲೂ ವಾಗ್ಮೋರೆ ಜನಿಸುತ್ತಾರೆಂದು ಕೊಲೆ ಆರೋಪಿ ಪರ ನಿಂತು ಮತ್ತಷ್ಟು ಕಗ್ಗೊಲೆಗೆ ಪ್ರಚೋದಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಗೌರಿ ಲಂಕೇಶ್ ಸೇರಿದಂತೆ ವಿಚಾರವಾದಿಗಳ ಹತ್ಯೆ ಹಿಂದಿನ ಶಕ್ತಿಗಳನ್ನು ಪತ್ತೆ ಹಚ್ಚಬೇಕಿದೆ. ಆ ಹಿನ್ನೆಲೆಯಲ್ಲಿ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ರನ್ನು ಕೂಡಲೇ ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಅಭಿನಂದನೆ: ಗೌರಿ ಹತ್ಯೆ ಪ್ರಕರಣವನ್ನು ತ್ವರಿತಗತಿಯಲ್ಲಿ ತನಿಖೆ ನಡೆಸಿದ ಸಿಟ್ ತಂಡ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ತನಿಖಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಹಿರಿಯ ಸಂಶೋಧಕ ಡಾ.ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಸಿಓಡಿ ಬದಲಿಗೆ ಸಿಟ್ ತಂಡಕ್ಕೆ ವಹಿಸಬೇಕೆಂದು ಕೋರಿದರು.
ಬಂಧಿತ ಆರೋಪಿಗಳ ಹಿಂದಿರುವವರು ಯಾರು ಮತ್ತು ಯಾವ ಸಂಘಟನೆ ಎಂಬುದನ್ನು ಬಹಿರಂಗಪಡಿಸಬೇಕು. ಬಿಜೆಪಿ, ಆರೆಸೆಸ್ಸ್, ಶ್ರೀರಾಮಸೇನೆ ಸೇರಿದಂತೆ ಸಂಘಪರಿವಾರದ ಮುಖಂಡರನ್ನು ಬಂಧಿಸಿ ವಿಚಾರಣೆ ನಡೆಸಬೇಕೆಂದು ಸೂಳಿಭಾವಿ ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಿತಿಯ ಷರೀಫ್, ಬಸವರಾಜ ಈರಣ್ಣ, ಯಲ್ಲಪ್ಪ, ವಿನೋದ್ ಹಾಜರಿದ್ದರು.







