ಅಮಿತ್ ಶಾ ನಿರ್ದೇಶಕರಾಗಿರುವ ಬ್ಯಾಂಕ್ ನಲ್ಲಿ ನೋಟು ಬ್ಯಾನ್ ನಂತರ 745 ಕೋಟಿ ರೂ. ಜಮೆ: ತನಿಖೆಗೆ ಕಾಂಗ್ರೆಸ್ ಆಗ್ರಹ

ಹೊಸದಿಲ್ಲಿ, ಜೂ.22: 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯ ಘೋಷಿಸಿದ ಐದು ದಿನಗಳ ಒಳಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿರುವ ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ (ಡಿಸಿಸಿಬಿ) 745.58 ಕೋಟಿ ರೂ. ಜಮೆಯಾಗಿರುವ ವರದಿಗಳ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಆದರೆ ಕಾಂಗ್ರೆಸ್ ಈ ಆಗ್ರಹವನ್ನು ಮಾಡುವುದಕ್ಕೂ ಮೊದಲೇ, ಅಹ್ಮದಾಬಾದ್ ಡಿಸಿಸಿಬಿಯಲ್ಲಿ ಓರ್ವ ಖಾತೆದಾರರ ಖಾತೆಯಲ್ಲಿ ಜಮೆ ಮಾಡಲಾದ ಸರಾಸರಿ ಮೊತ್ತವು 46,795 ಆಗಿದ್ದು, ಇದು ಗುಜರಾತ್‌ನ ಇತರ 18 ಡಿಸಿಸಿಬಿಗಳಲ್ಲಿ ಸರಾಸರಿ ಜಮೆಯಾಗಿರುವ ಮೊತ್ತಕ್ಕಿಂತ ಕಡಿಮೆಯಾಗಿದೆ ಎಂದು ನಬಾರ್ಡ್ ತಿಳಿಸಿದೆ. ನಬಾರ್ಡ್ ಅಥವಾ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಗ್ರಾಮೀಣಾಭಿವೃದ್ಧಿ ನಡೆಸುವ ಸಂಸ್ಥೆಗಳಿಗೆ ಸಾಲ ನೀಡುವ ದೇಶದ ಅತ್ಯುನ್ನತ ಆರ್ಥಿಕ ಸಂಸ್ಥೆಯಾಗಿದೆ.
ನೋಟು ಅಮಾನ್ಯಗೊಂಡ ಸಮಯದಲ್ಲಿ ಅಹ್ಮದಾಬಾದ್ ಡಿಸಿಸಿಬಿಯ 1.60 ಲಕ್ಷ ಗ್ರಾಹಕರು ತಮ್ಮಲ್ಲಿದ್ದ ಹಳೆ ನೋಟುಗಳನ್ನು ಜಮೆ ಅಥವಾ ಬದಲಾಯಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಜಮೆಯಾದ ಮೊತ್ತ 746 ಕೋಟಿ ರೂ. ಆಗಿದ್ದು ಇದು ಬ್ಯಾಂಕ್‌ನಲ್ಲಿ ಒಟ್ಟಾರೆ ಜಮೆಯಾದ ಮೊತ್ತದ ಕೇವಲ ಶೇ.15 ಆಗಿದೆ ಎಂದು ನಬಾರ್ಡ್ ತಿಳಿಸಿದೆ. ನಬಾರ್ಡ್ ಹೇಳಿಕೆಯನ್ನು ಉಲ್ಲೇಖಿಸಿರುವ ಬಿಜೆಪಿ ಅಹ್ಮದಾಬಾದ್ ಡಿಸಿಸಿಬಿ ದೇಶದಲ್ಲೇ ಅತಿದೊಡ್ಡ ಸಹಕಾರಿ ಬ್ಯಾಂಕ್ ಆಗಿದ್ದು ಅಷ್ಟೊಂದು ಬೃಹತ್ ಮೊತ್ತವನ್ನು ಸಂಗ್ರಹಿಸಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ತಿಳಿಸಿದೆ. ಸದ್ಯ ತನಿಖೆಗೆ ಆಗ್ರಹಿಸಿರುವ ಕಾಂಗ್ರೆಸ್, ಪ್ರಧಾನಿ ಮೋದಿ ಹಗರಣಕೋರರು ತಮ್ಮ ಕಪ್ಪು ಹಣವನ್ನು ಬದಲಾಯಿಸಲು ನೆರವು ನೀಡುವ ಉದ್ದೇಶದಿಂದ ನೋಟು ಅಮಾನ್ಯಗೊಳಿಸಿದ್ದರು. ಇದು ದೇಶದ ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ಆರೋಪಿಸಿದೆ.







