ಲೈಂಗಿಕ ವೃತ್ತಿ ನಿರಪರಾಧಿಕರಣಗೊಳಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಗೆ ವಿವಿಧ ಸಂಘಟನೆಗಳ ಆಗ್ರಹ
ಬೆಂಗಳೂರು, ಜೂ.22: ಲೈಂಗಿಕ ಕಾರ್ಮಿಕರನ್ನು 'ದಮನಿತ ಮಹಿಳೆಯರು' ಎಂದು ಕರೆಯುವಂತೆ ಅಧಿಕಾರಿಗಳಿಗೆ ರಾಜ್ಯ ಸರಕಾರದ ನೂತನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ನೀಡಿರುವ ಆದೇಶವನ್ನು ಲೈಂಗಿಕ ಕಾರ್ಮಿಕರ ಪರವಾಗಿರುವ ಹಲವಾರು ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
'ಕರುಣೆ, ಅನುಕಂಪ ಬೇಡ-ಘನತೆ ಮತ್ತು ಹಕ್ಕುಗಳು ಬೇಕು' ಎಂದು ದಶಕಗಳಿಂದ ಲೈಂಗಿಕ ಕಾರ್ಮಿಕರ ಹಕ್ಕುಗಳಿಗಾಗಿ ನಾವು ಮಾಡುತ್ತಿರುವ ಹೋರಾಟವನ್ನು ಸಚಿವೆ ನೀಡಿರುವ ಹೇಳಿಕೆಯು ಹಿಮ್ಮೆಟ್ಟಿಸುತ್ತದೆ. ಕಳೆದ 2 ದಶಕಗಳಲ್ಲಿ, ರಾಜ್ಯಾದ್ಯಂತ ಮತ್ತು ದೇಶದ ಇತರ ಭಾಗಗಳಲ್ಲಿಯೂ ನಮ್ಮ ಹಕ್ಕೊತ್ತಾಯಗಳಿಗಾಗಿ ನಾವು ಆಗ್ರಹಿಸಿದ್ದೇವೆ. ನಾವು ಸಂಘಟಿತರಾಗಿ ಪೋಲಿಸ್, ಗೂಂಡಾ, ಸಾರ್ವಜನಿಕರು, ಕುಟುಂಬದವರು, ಸಂಗಾತಿಗಳು ಮತ್ತು ಕುಟುಂಬ ಸದಸ್ಯರಿಂದ ನಮ್ಮ ಮೇಲಾಗುವ ಹಿಂಸೆಯನ್ನು ಹಾಗೂ ಸಾಮಾಜಿಕ ಅಸಹಿಷ್ಣುತೆಯನ್ನು ಕಡಿಮೆ ಮಾಡಲು ಕಾರ್ಯನಿರ್ವಹಿಸಿದ್ದೇವೆ. ದೇಶದಲ್ಲಿ ಎಚ್‌ಐವಿ ನಿಯಂತ್ರಣ ಕಾರ್ಯದಲ್ಲಿ ಬೆನ್ನಲುಬಾಗಿದ್ದೇವೆ. ಸುಪ್ರೀಂಕೋರ್ಟ್ ರಚಿಸಿದ ಮಂಡಳಿ ಮತ್ತು ಹಲವಾರು ಅಂತಾರಾಷ್ಟ್ರೀಯ ಆಯೋಗಗಳು ಲೈಂಗಿಕ ಕಾರ್ಮಿರ ಹಕ್ಕುಗಳಿಗೆ ಮಾನ್ಯತೆ ನೀಡಿವೆ. ನಾವು ಲೈಂಗಿಕ ವೃತ್ತಿ ಘನತೆವೆತ್ತ ಕಾರ್ಯವೆಂದು ಪ್ರತಿಪಾದಿಸುತ್ತೇವೆ. ಸಚಿವರ ಈ ಹೇಳಿಕೆಯು ನಮ್ಮನ್ನು ಅಗೋಚರವಾಗಿಸುತ್ತದೆ ಮತ್ತು ನಮ್ಮ ಅಸ್ಮಿತೆಯ, ಸ್ವಯಂ ಗುರುತಿಸುವಿಕೆಯ ಮತ್ತು ಸ್ವಯಂ ನಿರ್ಧಾರದ ಹಕ್ಕುಗಳನ್ನು ನಿರಾಕರಿಸುತ್ತದೆ. ಘನತೆ, ಸುರಕ್ಷತೆ ಮತ್ತು ನ್ಯಾಯಕ್ಕಾಗಿ ದಶಕಗಳ ನಮ್ಮ ಹೋರಾಟಗಳನ್ನು ನಿರಾಕರಿಸುತ್ತದೆ ಹಾಗೂ ಕಡೆಗಣಿಸುತ್ತದೆ ಎಂದು ಸಂಘಟನೆಗಳು ಬೇಸರ ವ್ಯಕ್ತಪಡಿಸಿವೆ.
ಹಲವಾರು ಸಂಘ ಸಂಸ್ಥೆಗಳು ಮತ್ತು ಸರಕಾರಿ ಏಜೆನ್ಸಿಗಳು ದಾಳಿ ಮತ್ತು ರಕ್ಷಣೆ ಕಾರ್ಯತಂತ್ರ ಮತ್ತು ಪುನರ್ವಸತಿ ಪ್ರಕ್ರಿಯೆಯಿಂದ ಲೈಂಗಿಕ ಕಾರ್ಮಿಕರ ಸಮುದಾಯಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತಿವೆ. ಈ ಸಂದರ್ಭದಲ್ಲಿ ನಮಗೆ ದಮನಿತ ಮಹಿಳೆಯರು ಎಂದು ಹಣೆಪಟ್ಟಿಕಟ್ಟುವುದರಿಂದ ನಮ್ಮ ವಿರುದ್ಧ ಕಳಂಕ ಹಾಗೂ ತಾರತಮ್ಯ ಹೆಚ್ಚುತ್ತವೆ ಎಂದು ಸಂಘಟನೆಗಳು ಬೇಸರ ವ್ಯಕ್ತಪಡಿಸಿವೆ.
ಜಯಮಾಲಾ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಲ್ಲದೇ, ಅದನ್ನು ಹಿಂಪಡೆಯಬೇಕೆಂದು ಸಂಘಟನೆಗಳು ಆಗ್ರಹಿಸಿವೆ. ನಮ್ಮನ್ನು ಸಂಪರ್ಕಿಸದೇ ನಮ್ಮ ಬಗ್ಗೆ ಈ ಹೇಳಿಕೆಯನ್ನು ನೀಡಲಾಗಿದೆ. ಸಚಿವರು ನಿಜವಾಗಿಯೂ ನಮ್ಮ ಹಕ್ಕುಗಳ ಬಗ್ಗೆ ಬದ್ಧರಾಗಿದ್ದಲ್ಲಿ ತಕ್ಷಣವೇ ತಮ್ಮ ಹಕ್ಕೊತ್ತಾಯಗಳಿಗಾಗಿ ಕ್ರಮಕೈಗೊಳ್ಳೇಕೆಂದು ಸಂಘಟನೆಗಳು ಆಗ್ರಹಿಸಿವೆ.
ಹಕ್ಕೊತ್ತಾಯಗಳು: ರಾಜ್ಯದಲ್ಲಿ ಲೈಂಗಿಕ ವೃತ್ತಿಯನ್ನು ನಿರಪರಾಧಿಕರಣಗೊಳಿಸುವುದು. ವಸತಿ, ಜೀವನೋಪಾಯ, ಆರೋಗ್ಯ, ಸಾಮಾಜಿಕ ಸೌಲಭ್ಯಗಳು ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವ ವಿಷಯಗಳಲ್ಲಿ ಲೈಂಗಿಕ ಕಾರ್ಮಿಕರ ವಿರುದ್ಧ ನಡೆಯುವ ತಾರತಮ್ಯ ನಿಲ್ಲಿಸುವುದು. ಲೈಂಗಿಕ ಕಾರ್ಮಿಕರ ಹಕ್ಕುಗಳಿಗೆ ಬೆಂಬಲವನ್ನು ಖಚಿತಪಡಿಸಿಕೊಂಡು, ಭಾರತದ ಇತರ ನಾಗರಿಕರಿಗೆ ನೀಡುವಂತೆ, ಸರಕಾರಿ ಅಧಿಕಾರಿಗಳು, ಹಕ್ಕು ಆಧಾರಿತ ರೀತಿಯ ಸೂಕ್ತ ಕ್ರಮ ಜರುಗಿಸುವಂತೆ ಖಚಿತಪಡಿಸಿಕೊಳ್ಳುವುದು. ಲೈಂಗಿಕ ಕಾರ್ಮಿಕರ ಮೇಲಾಗುವ ಎಲ್ಲ ರೀತಿಯ ಹಿಂಸೆ, ದೌರ್ಜನ್ಯಗಳನ್ನು ಗುರುತಿಸಿ, ಅವರ ದೂರುಗಳನ್ನು ನೋಂದಾಯಿಸಿ ಸೂಕ್ತ/ತ್ವರಿತ ಕ್ರಮ ತೆಗೆದುಕೊಳ್ಳಬೇಕು. ಲೈಂಗಿಕ ಕಾರ್ಮಿಕರ ಮೇಲಾಗುವ ಪೋಲಿಸ್ ಮತ್ತು ಗೂಂಡಾ ದೌರ್ಜನ್ಯವನ್ನು ನಿಯಂತ್ರಿಸುವುದು ಮತ್ತು ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ವಿವಿಧ ಸಂಘಟನೆಗಳು ಸಚಿವೆ ಜಯಮಾಲಾರನ್ನು ಆಗ್ರಹಿಸಿವೆ.
'ದಮನಿತ ಮಹಿಳೆಯರು' ಎಂಬ ಹೇಳಿಕೆ ಒಪ್ಪಲಾಗುವುದಿಲ್ಲ
ಲೈಂಗಿಕ ವೃತ್ತಿ ಅಲ್ಲದೇ ಇತರ ವೃತ್ತಿಗಳಲ್ಲಿಯೂ ಇರುವ ಅನೇಕ ರೀತಿಯ ದೌರ್ಜನ್ಯ ಮತ್ತು ಶೋಷಣೆಗಳ ಎಲ್ಲ ಆಯಾಮಗಳ ಬಗ್ಗೆಯೂ ಅರಿವು ಹೊಂದಿದ್ದು, ಇದನ್ನು ಬದಲಾಯಿಸುವುದೆ ನಮ್ಮ ಹೋರಾಟವಾಗಿದೆ. ಸ್ವಯಂಪ್ರೇರಿತ ವಯಸ್ಕ ಲೈಂಗಿಕ ಕಾರ್ಮಿಕರನ್ನು 'ದಮನಿತ ಮಹಿಳೆಯರು' ಎಂಬ ಹೇಳಿಕೆಯು ಒಪ್ಪಲಾಗುವುದಿಲ್ಲ ಎಂದು ಸಂಘಟನೆಗಳು ತಿಳಿಸಿವೆ.







