ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ: ಪಿಡಿಒಗಳಿಗೆ ಸುಕುಮಾರ್ ಶೆಟ್ಟಿ ಸೂಚನೆ

ಕುಂದಾಪುರ, ಜೂ. 22: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜನರಿಗೆ ಬಹಳ ಹತ್ತಿರ ಹಾಗೂ ಸುಲಭವಾಗಿ ಸಿಗುತ್ತಿದ್ದು, ಇದರಿಂದ ಪಿಡಿಓಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಕುಂದಾಪುರ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೈಂದೂರು ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಆಯಾ ಗ್ರಾಮದಲ್ಲಿ ಯಾವ ಸಮಸ್ಯೆಗಳಿವೆ ಎಂಬುದನ್ನು ಪಿಡಿಓಗಳು ಅರಿತು ಕೊಂಡು ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಪಿಡಿಓಗಳು ಯಾವುದೇ ಸಂದರ್ಭದಲ್ಲೂ ತಮ್ಮ ಮೊಬೈಲ್‌ನ್ನು ಸ್ವಿಚ್‌ಆಫ್ ಮಾಡಬಾರದು. ಯಾವುದೇ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸದ ಕುರಿತು ದೂರುಗಳು ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕಾಲ್ತೋಡು, ಹೊಸಾಡು ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಕಾಲು ಸಂಕ ದಲ್ಲಿಯೇ ಹಳ್ಳ ದಾಟುತ್ತಿದ್ದು, ಇಂತಹ ಗಂಭೀರ ಸಮಸ್ಯೆ ಬಗ್ಗೆ ಗ್ರಾಪಂಗಳು ಇನ್ನು ಯಾವುದೇ ಕ್ರಮ ಕೈಗೊಂಡಿಲ್ಲ. ಆದುದರಿಂದ ಅಧಿಕಾರಿಗಳು ತಕ್ಷಣವೇ ಈ ಕುರಿತು ಕ್ರಮ ಜರಗಿಸಬೇಕೆಂದು ಶಾಸಕರು ಸೂಚನೆ ನೀಡಿದರು.
ಕ್ಷೇತ್ರದಲ್ಲಿ ಐದು ನದಿಗಳು ಹರಿಯುತ್ತಿದ್ದರೂ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿರುತ್ತದೆ. ಈ ಬಗ್ಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸು ವುದರ ಬಗ್ಗೆ ಅಧಿಕಾರಿಗಳು ಚಿಂತನೆ ಮಾಡಬೇಕು. ಜಲಸಂಪನ್ಮೂಲವನ್ನು ಸಂವರ್ಧನೆ ಮಾಡಿಕೊಂಡು ನೀರು ಪೂರೈಸಲು ಮುಂದಾಗಬೇಕು ಎಂದು ಅವರು ಹೇಳಿದರು.
ಈ ಬಾರಿ ಹೆಚ್ಚಿನ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಅಂದಾಜು ಪಟ್ಟಿ ಯನ್ನು ಸಲ್ಲಿಸಬೇಕು. ಕುಬ್ಜಾ ನದಿ ತೀರದಲ್ಲಿರುವ ಗ್ರಾಪಂಗಳು ಟ್ಯಾಂಕರ್ ನೀರಿನ ಪೂರೈಕೆಗೆ 15ಲಕ್ಷ ರೂ. ಖರ್ಚು ಮಾಡುತ್ತಿರುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಟ್ಯಾಂಕರ್ ನೀರಿಗೆ ಹೆಚ್ಚು ಬಿಲ್ ಮಾಡುವ ಪಂಚಾಯತ್ ಗಳ ಕುರಿತು ತನಿಖೆ ನಡೆಲಾಗುವುದು ಎಂದರು.
ಸಭೆಯಲ್ಲಿ ತಹಶೀಲ್ದಾರ್ ರವಿ, ತಾಪಂ ಅಧ್ಯಕ್ಷೆ ಜಯಶ್ರೀ ಮೊಗವೀರ, ತಾಪಂ ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಗುಜ್ಜಾಡಿ ಉಪಸ್ಥಿತರಿದ್ದರು.







