ಜು.2ರಿಂದ 12ರ ವರೆಗೆ ಬಜೆಟ್ ಅಧಿವೇಶನ

ಬೆಂಗಳೂರು, ಜೂ.22: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಮೊದಲ ಜಂಟಿ ಅಧಿವೇಶನ ರಾಜ್ಯಪಾಲರ ಭಾಷಣದೊಂದಿಗೆ ಜುಲೈ 2 ರಿಂದ ಆರಂಭವಾಗಲಿದ್ದು, ಜು.5ರಿಂದ 12ರ ವರೆಗೆ ಬಜೆಟ್ ಅಧಿವೇಶನ ನಡೆಸಲು ಸಚಿವ ಸಂಪುಟ ತೀರ್ಮಾನಿಸಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ನೂತನ ಸರಕಾರ ಪ್ರಾರಂಭದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವುದು ವಾಡಿಕೆ. ಆ ಪ್ರಕಾರವಾಗಿ ಜು.2ರ ಮಧ್ಯಾಹ್ನ 12.30ಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಜು.5ರಂದು ಬಿಜೆಟ್: ಜು.3 ಮತ್ತು 4ರಂದು ಎರಡು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಜು.5ರ ಮಧ್ಯಾಹ್ನ 11:30ಕ್ಕೆ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2017-18ನೆ ಸಾಲಿನ ಮೈತ್ರಿಕೂಟ ಸರಕಾರದ ಮೊದಲ ಬಜೆಟ್ ಮಂಡಿಸಲಿದ್ದು, ಜು.12ರ ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಅವರು ಹೇಳಿದರು.





