ಬಿಬಿಎಂಪಿ ಮಾಸಿಕ ಸಭೆ: ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಗೆ ಒತ್ತಾಯ

ಬೆಂಗಳೂರು, ಜೂ. 22: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ದೀಪ ನಿರ್ವಹಣೆ ಕೆಲಸವನ್ನು ಅಗತ್ಯ ಸೇವೆಯೆಂದು ಪರಿಗಣಿಸಿ ಕೂಡಲೇ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸಬೇಕು ಎಂದು ಪಕ್ಷಾತೀತವಾಗಿ ಎಲ್ಲ ಪಾಲಿಕೆ ಸದಸ್ಯರು ಕೌನ್ಸಿಲ್ ಸಭೆಯಲ್ಲಿ ಒತ್ತಾಯಿಸಿದರು.
ಶುಕ್ರವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ, ಬಾಕಿ ಬಿಲ್ ಪಾವತಿ ಕುರಿತುಂತೆ ವಿಷಯ ಪ್ರಸ್ತಾಪಿಸಿದ ಮಾಜಿ ಮೇಯರ್ ಬಿ.ಎಸ್.ಸತ್ಯಾನಾರಾಯಣ, ಬೀದಿ ದೀಪ ನಿರ್ವಹಣೆ ಗುತ್ತಿಗೆದಾರರು ಪ್ರತಿಭಟನೆಗೆ ಮುಂದಾಗಿ, ಬೀದಿ ದೀಪಗಳ ನಿರ್ವಹಣೆ ಮಾಡದ ಕಾರಣ ವಾರ್ಡ್ ರಸ್ತೆಗಳು ಹಾಗೂ ಉದ್ಯಾನಗಳಲ್ಲಿ ಕತ್ತಲು ಆವರಿಸಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಬೀದಿ ದೀಪಗಳು ಬೆಳಗದ ಹಿನ್ನೆಲೆಯಲ್ಲಿ ವಾರ್ಡ್‌ಗಳಲ್ಲಿ ಜನರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಹಿತಕರ ಘಟನೆಗಳು ಸಂಭವಿಸುವ ಆತಂಕ ಎದುರಾಗಿದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪೊಲೀಸರು ಪಾಲಿಕೆ ಸದಸ್ಯರನ್ನು ಹೊಣೆ ಮಾಡುತ್ತಿದ್ದು, ಕೂಡಲೇ ಬಿಲ್ ಪಾವತಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಮೇಯರ್ ಆರ್.ಸಂಪತ್‌ರಾಜ್, ತ್ಯಾಜ್ಯ ವಿಲೇವಾರಿ, ಕುಡಿಯುವ ನೀರು, ಬೀದಿ ದೀಪ ನಿರ್ವಹಣೆ ಅಗತ್ಯ ಸೇವೆಗಳಾಗಿವೆ. ಕಳೆದ ಸಭೆಯಲ್ಲಿಯೇ ಅಧಿಕಾರಿಗಳಿಗೆ ಬಿಲ್ ಪಾವತಿಸುವಂತೆ ಸೂಚನೆ ನೀಡಲಾಗಿದ್ದು, ಅಧಿಕಾರಿಗಳು ಬಿಲ್ ಪಾವತಿಗೆ ಮುಂದಾಗಿಲ್ಲ ಎಂದರು.
ಬಳಿಕ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗುಣಶೇಖರ್, ತುರ್ತು ಸಂದರ್ಭಗಳಲ್ಲಿ ಆಯುಕ್ತರು ಅಗತ್ಯ ಸೇವೆಯೆಂದು ಪರಿಗಣಿಸಿ ಬಿಲ್ ಪಾವತಿಸಬಹುದಾಗಿದೆ. ಆನಂತರದಲ್ಲಿ ಸ್ಥಾಯಿ ಸಮಿತಿಯ ಮುಂದೆ ವಿಷಯ ಮಂಡಿಸಲು ಅವಕಾಶವಿದ್ದರೂ, ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಹೇಳಿದರು.
ಪಾಲಿಕೆಯ ಆಯುಕ್ತ ಮಹೇಶ್ವರ್ ರಾವ್ ಸಹ ಉತ್ತರಿಸಿ, ನ್ಯಾಯಾಲಯದ ಆದೇಶದಂತೆ ಜೇಷ್ಠತೆಯ ಆಧಾರದಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗುತ್ತಿದೆ. ಪಾಲಿಕೆಯಲ್ಲಿ ಬೀದಿ ದೀಪ ನಿರ್ವಹಣೆಯಲ್ಲಿ ಅಗತ್ಯವೆಂದು ಪರಿಗಣಿಸಿ ನಿರ್ಣಯ ಕೈಗೊಂಡರೆ ಕೂಡಲೇ ಬಾಕಿ ಬಿಲ್ ಪಾವತಿಸುವುದಾಗಿ ತಿಳಿಸಿದರು.
ಅನುಮತಿ ಇಲ್ಲ: ಪಶ್ಚಿಮ ವಲಯದ ಪುಲಿಕೇಶಿನಗರ ಹಾಗೂ ಶಿವಾಜಿನಗರ ಹೊರತುಪಡಿಸಿ 30 ವಾರ್ಡ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಗುತ್ತಿಗೆಯನ್ನು ಎಂಎಸ್‌ಜಿಪಿಗೆ ಅಧಿಕಾರಿಗಳು ನೀಡಿದ್ದಾರೆ. ಪಾಲಿಕೆಯ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್‌ನ ಅನುಮೋದನೆ ಪಡೆಯದೇ ಹೇಗೆ ಕಾರ್ಯಾದೇಶ ನೀಡಲಾಗಿದೆ ಎಂದು ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ ಹಿನ್ನೆಲೆಯಲ್ಲಿ ಮೇಯರ್ ಸಂಪತ್‌ರಾಜ್ ಮಾತನಾಡಿ, ಕಾರ್ಯಾದೇಶವನ್ನು ಮರುಪರಿಶೀಲನೆ ಮಾಡುವಂತೆ ಹಾಗೂ ಸ್ಥಾಯಿ ಸಮಿತಿಗೆ ಕಳುಹಿಸುವಂತೆ ಸೂಚನೆ ನೀಡಲಾಗುವುದೆಂದರು.
ಅಧಿಕಾರ ಮೊಟಕು: ಪಾಲಿಕೆಯ ಅಧಿಕಾರಿಗಳು ಸ್ಥಾಯಿ ಸಮಿತಿಗಳ ಅಧಿಕಾರವನ್ನು ಸಂಪೂರ್ಣವಾಗಿ ಮೊಟಕುಗೊಳಿಸಿದ್ದು, ಸಮಿತಿಗಳಿಗೆ ಯಾವುದೇ ಕಡತಗಳು, ಆದೇಶಗಳು, ಆಂತರಿಕ ನೋಟ್ಸ್‌ಗಳನ್ನು ಕಳುಹಿಸುತ್ತಿಲ್ಲ. ಪಾಲಿಕೆ ಒಂದು ರೀತಿ ಮಾವನ ಮನೆಯಂತಾಗಿದ್ದು, ಇಲ್ಲಿಗೆ ಯಾವ ಅಧಿಕಾರಿ ಬರುತ್ತಿದ್ದಾರೆ, ಯಾರು ಹೋಗುತ್ತಿದ್ದಾರೆ ಎಂಬ ಮಾಹಿತಿಯಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳಿಂದ ನಿಯೋಜನೆ ಮೇಲೆ ಪಾಲಿಕೆಗೆ ಬಂದಿರುವ ಅಧಿಕಾರಿಗಳು ಹತ್ತಾರು ವರ್ಷಗಳಿಂದ ಇಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವ ಕಡೆಗಳಲ್ಲಿ ಖಾತಾ, ನಕ್ಷೆಯಿಲ್ಲದಿದ್ದರೂ 500ಕ್ಕಿಂತ ಹೆಚ್ಚಿನ ಫ್ಲಾಟ್‌ಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗುತ್ತಿವೆ ಎಂದು ಆರೋಪಿಸಿದರು.
ಪಾದಚಾರಿ ಮಾರ್ಗಗಳಲ್ಲಿ ವಾಣಿಜ್ಯ ಮಳಿಗೆಗಳು: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪಾದಚಾರಿ ಮಾರ್ಗಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ಬಿಎಂಆರ್‌ಸಿಎಲ್ ಅನುಮತಿ ನೀಡಿದ್ದು, ಇದರಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ ಎಂದು ಬಿಜೆಪಿ ಪಾಲಿಕೆ ಸದಸ್ಯ ಡಾ.ರಾಜು ಆರೋಪಿಸಿದರು.
ವಿಜಯನಗರದಲ್ಲಿ ಪಾದಚಾರಿ ಮಾರ್ಗದಲ್ಲಿಯೇ ಫೋಟೋ ಸ್ಟುಡಿಯೋ, ಹೊಟೇಲ್ ಸೇರಿದಂತೆ ಇತರೆ ಮಳಿಗೆಗಳನ್ನು ಆರಂಭಿಸಲಾಗಿದ್ದು, ಇವರಿಗೆ ವಾಣಿಜ್ಯ ಪರವಾನಿಗೆ ನೀಡಿದವರು ಯಾರು? ಹಂತ ಹಂತವಾಗಿ ಪಾಲಿಕೆಯ ಜಾಗಗಳನ್ನು ಮೆಟ್ರೋ ಒತ್ತುವರಿ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದು, ಪಾಲಿಕೆಯ ಅಧಿಕಾರಿಗಳು ಏಕೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದೂರಿದರು.
ತದನಂತರ ಉತ್ತರಿಸಿದ ಮೇಯರ್ ಸಂಪತ್‌ರಾಜ್, ಬಿಎಂಆರ್‌ಸಿಎಲ್ ಜತೆಗೆ ಪಾಲಿಕೆ ಮಾಡಿಕೊಂಡಿರುವ ಒಪ್ಪಂದದಲ್ಲಿರುವ ಅಂಶಗಳನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶೀಘ್ರ ಪುಸ್ತಕ ವಿತರಿಸಿ
ಶಾಲೆಗಳು ಆರಂಭವಾಗಿ 20 ದಿನಗಳು ಕಳೆದರೂ ಈವರೆಗೆ ಪಾಲಿಕೆಯ ಶಾಲಾ ಮಕ್ಕಳಿಗೆ ಪುಸ್ತಕಗಳು, ಬ್ಯಾಗ್ ಹಾಗೂ ಶೂಗಳನ್ನು ವಿತರಿಸಿಲ್ಲ. ಟೆಂಡರ್ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈವರೆಗೆ ವಿದ್ಯಾರ್ಥಿಗಳಿಗೆ ಪುಸ್ತಕಗಳು ಸಿಕ್ಕಿಲ್ಲ. ಸರಕಾರಿ ಶಾಲೆಗಳಿಗಿಂತಲೂ ಪಾಲಿಕೆಯ ಶಾಲೆಗಳಲ್ಲಿ ಪರೀಕ್ಷಾ ಫಲಿತಾಂಶ ಉತ್ತಮವಾಗಿದೆ. ಹೀಗಾಗಿ, ಶೀಘ್ರ ವಿದ್ಯಾರ್ಥಿಗಳಿಗೆ ಪುಸ್ತಕಗಳು ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಪಾಲಿಕೆ ಸದಸ್ಯೆ ಸವಿತಾ ಮಾಯಣ್ಣ ಮನವಿ ಮಾಡಿದರು.ಕೆಂಪೇಗೌಡ ಜಯಂತಿ ಸರಕಾರದ ವತಿಯಿಂದ ಜೂ.27ರಂದು ಅರಮನೆ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುತ್ತಿದೆ. ಪಾಲಿಕೆಯ ಎಲ್ಲ ಸದಸ್ಯರೂ ಸಹಕಾರ ನೀಡಬೇಕು.
-ಸಂಪತ್‌ರಾಜ್, ಮೇಯರ್







