ರಿಲಯನ್ಸ್ ಕಂಪನಿಯಿಂದ 37 ಕೋಟಿ ರೂ.ವಂಚನೆ
ವಾಣಿಜ್ಯ ತೆರಿಗೆ ಇಲಾಖೆ ದಾಳಿ

ಬೆಂಗಳೂರು, ಜೂ. 22: ಜಿಎಸ್ಟಿ ಅಡಿಯಲ್ಲಿ ನೋಂದಾಯಿತ ವರ್ತಕರು ಹಾಗೂ ಇಂಟರ್ನೆಟ್ ಸೇವೆಗಳು ಮತ್ತು ಟೆಲಿ ಕಮ್ಯೂನಿಕೇಷನ್ ಸೇವೆಗಳ ವ್ಯವಹಾರದಲ್ಲಿ ತೊಡಗಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿ. ಮತ್ತು ರಿಲಯನ್ಸ್ ಐಡಿಸಿ ಲಿ. ಇದರ ತೆರಿಗೆ ಹಾಗೂ ಬಡ್ಡಿಯೂ ಸೇರಿ 37 ಕೋಟಿ ರೂ. ವಂಚನೆಯನ್ನು ವಾಣಿಜ್ಯ ತೆರಿಗೆ ಇಲಾಖೆ ಪತ್ತೆ ಮಾಡಿದೆ.
ಮೇಲ್ಕಂಡ ಕಂಪೆನಿಗಳು ಈ ದಿನದ ವರೆಗೆ ತೆರಿಗೆ ಹಾಗೂ ಬಡ್ಡಿಯೂ ಸೇರಿದಂತೆ 37 ಕೋಟಿ ರೂ.ಗಳನ್ನು ಪಾವತಿಸಿರುವುದಿಲ್ಲ. ಜುಲೈ 2017ರಿಂದ ಮೇ 2018ರ ವರೆಗಿನ ಅವಧಿಯ ಮಾಡಿ ರಿಟರ್ನ್‌ಗಳನ್ನು ಸಲ್ಲಿಸಿರುವುದಿಲ್ಲ ಹಾಗೂ ಸರಕಾರಕ್ಕೆ ಕಾನೂನಾತ್ಮಕವಾಗಿ ಬರಬೇಕಾದ ಬಾಕಿ ತೆರಿಗೆ ಮೊತ್ತವನ್ನು ಪಾವತಿಸಿಲ್ಲ. ವಾಣಿಜ್ಯ ತೆರಿಗೆಗಳ ಇಲಾಖೆಯ ದಕ್ಷಿಣ ವಲಯ ಜಾರಿ ಭಾಗದ ಅಧಿಕಾರಿಗಳು ಜೂ.20ರಂದು ತಪಾಸಣೆ ಕೈಗೊಂಡಿರುತ್ತಾರೆ. ಈ ವರ್ತಕರು ತೆರಿಗೆ ಹಾಗೂ ಬಡ್ಡಿಯನ್ನು ಪಾವತಿಸದಿರುವುದನ್ನು ಒಪ್ಪಿಕೊಂಡು, 15.05 ಕೋಟಿ ರೂ.ಗಳನ್ನು ಜೂ.21ರಂದು ಪಾವತಿಸಿರುತ್ತಾರೆ ಹಾಗೂ ಬಾಕಿ ಮೊತ್ತವನ್ನು ಪಾವತಿಸಲು ಒಪ್ಪಿರುತ್ತಾರೆ. ಬಾಕಿ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ಇಲಾಖೆಯು ಸರಕು ಮತ್ತು ಸೇವಾ ತೆರಿಗೆಯ ಕಾನೂನಿನ ಅನ್ವಯ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.





