ವಿಶ್ವಸಂಸ್ಥೆಯ ವೇದಿಕೆಯಲ್ಲಿ ಹಕ್ಕುಗಳಿಗಾಗಿ ಪ್ರತಿಪಾದಿಸಿದ ದಲಿತ ಮಹಿಳಾ ಗುಂಪು

ಹೊಸದಿಲ್ಲಿ,ಜೂ.22: ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 38ನೇ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ಪಾರ್ಶ್ವ ಕಾರ್ಯಕ್ರಮವೊಂದನ್ನು ಸಂಘಟಿಸಿದ ಅಖಿಲ ಭಾರತ ದಲಿತ ಮಹಿಳಾ ಅಧಿಕಾರ ಮಂಚ್ ಭಾರತದಲ್ಲಿ ಜಾತಿಗಳ ಆಧಾರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾಚಾರಗಳನ್ನು ನಿರೂಪಿಸಿದೆಯಲ್ಲದೆ,ತನ್ನ ವಾದಕ್ಕೆ ಸಾಕ್ಷಾಧಾರಗಳನ್ನೂ ಮುಂದಿರಿಸಿದೆ.
ದಲಿತ ಮಹಿಳೆಯರ ಏಳಿಗೆಗಾಗಿ ಸಲಹಾ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಂಚ್ ಜಾತಿಯಾಧಾರಿತ ಹಿಂಸೆಗೆ ಗುರಿಯಾದ ದಲಿತ ಮಹಿಳೆಯರ ಕಥನಗಳ ವರದಿಯನ್ನು ಬಿಡುಗಡೆಗೊಳಿಸಿತಲ್ಲದೆ,ಈ ಕುರಿತು ಕಿರು ಸಾಕ್ಷಚಿತ್ರವೊಂದನ್ನೂ ಪ್ರದರ್ಶಿಸಿತು.
2017ರಲ್ಲಿ ಹರ್ಯಾಣದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ ಪರಿಶಿಷ್ಟ ಜಾತಿಗೆ ಸೇರಿದ 17ರ ಹರೆಯದ ಬಾಲಕಿಯ ಕಥೆಯನ್ನು ಈ ಸಾಕ್ಷಚಿತ್ರವು ಹೇಳುತ್ತದೆ. ಆಕೆಯ ಕುಟುಂಬ ಇನ್ನೂ ಪರಿಹಾರಕ್ಕಾಗಿ ಕಾಯುತ್ತಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ಆರೋಪಿಯನ್ನು ಈ ವರೆಗೂ ಬಂಧಿಸಲಾಗಿಲ್ಲ. ಮಂಚ್‌ನ ಪ್ರಧಾನ ಕಾರ್ಯದರ್ಶಿ ಆಶಾ ಕೌತಾಲ್ ಅವರು ಮಂಡಳಿಗೆ ಸಲ್ಲಿಸಿದ ಮೂರು ಸಾಕ್ಷಾಧಾರಗಳಲ್ಲಿ ಇದು ಒಂದಾಗಿದೆ.
ವರದಿಯು ಜಾತಿಯಾಧಾರಿತ ಮಹಿಳೆಯರ ಮೇಲಿನ ಹಿಂಸಾಚಾರಗಳು ಮತ್ತು ತಾರತಮ್ಯಗಳ ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿದೆ. ಇತರ ವರ್ಗಗಳ ಶೇ.19.7ರಷ್ಟು ಮಹಿಳೆಯರಿಗೆ ಹೋಲಿಸಿದರೆ ಶೇ.33.2ರಷ್ಟು ಪರಿಶಿಷ್ಟ ಜಾತಿಗಳ ಮಹಿಳೆಯರು ತಮ್ಮ 15ರ ಹರೆಯದಿಂದಲೇ ದೈಹಿಕ ಹಿಂಸೆಗಳಿಗೆ ಗುರಿಯಾಗುತ್ತಾರೆ ಎನ್ನುವುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಬೆಳಕಿಗೆ ತಂದಿದೆ. ಕಳೆದ ದಶಕ(2007-2017)ದಲ್ಲಿ ದಲಿತರ ವಿರುದ್ಧದ ಅಪರಾಧಗಳಲ್ಲಿ ಶೇ.66ರಷ್ಟು ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕದ ಅಂಕಿಅಂಶಗಳು ಬೆಟ್ಟು ಮಾಡಿವೆ.
ವಾಸ್ತವದಲ್ಲಿ ಈ ಅಂಕಿಅಂಶಗಳು ಕೇವಲ ಒಂದು ಭಾಗವಾಗಿವೆ. ಪೊಲೀಸರು ಮತ್ತು ನ್ಯಾಯಾಂಗ ವ್ಯವಸ್ಥೆಯ ಅಸಹಕಾರ,ನಾಚಿಕೆ ಮತ್ತು ಸಾಮಾಜಿಕ ಕಳಂಕ ಮತ್ತು ಪ್ರಬಲ ಜಾತಿ ಗುಂಪುಗಳಿಂದ ಪ್ರತೀಕಾರದ ಭೀತಿಗಳಿಂದಾಗಿ ದಲಿತ ಮಹಿಳೆಯರ ವಿರುದ್ಧದ ಹೆಚ್ಚಿನ ದೌರ್ಜನ್ಯ ಪ್ರಕರಣಗಳು ವರದಿಯಾಗುವುದಿಲ್ಲ ಎಂದು ವರದಿಯು ತಿಳಿಸಿದೆ.
ಜಾತಿಯಾಧಾರಿತ ಅಪರಾಧಗಳನ್ನು ಅತ್ಯಂತ ಗಂಭೀರ ಮಾನವ ಹಕ್ಕು ಬಿಕ್ಕಟ್ಟುಗಳಲ್ಲೊಂದು ಎಂದು ವಿಶ್ವಸಂಸ್ಥೆಯು ಪರಿಗಣಿಸುವುದೇ ಎಂದು ಪ್ರಶ್ನಿಸಿದ ಕೌತಾಲ್ ಅವರು,ಜಾತಿಯಾಧಾರಿತ ತಾರತಮ್ಯವು ಜಾಗತಿಕ ಸಮಸ್ಯೆಯಾಗಿದೆ,ಆದರೆ ಭಾರತವು ಅತ್ಯಂತ ಹೆಚ್ಚಿನ ಸಂಖ್ಯೆಯ ದಲಿತರನ್ನು ಒಳಗೊಂಡಿರುವುದರಿಂದ ಅದು ದೃಢವಾದ ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಅಧಿವೇಶನವು ಜೂ.18ರಂದು ಆರಂಭಗೊಂಡಿದ್ದು,ಜು.6ರಂದು ಸಮಾರೋಪಗೊಳ್ಳಲಿದೆ.







